ವಿಟ್ಲ, ಅ 19 (DaijiworldNews/SM): ನಾನು ಇದೇ ಕ್ಷೇತ್ರದಲ್ಲಿ ಮತ್ತೆ ಸ್ಪರ್ಧಿಸಿ, ಗೆದ್ದು ಶಾಸಕಿಯಾಗಿ ಹಿಂದಿನ ಅವಧಿಯಲ್ಲಿ ಮಂಜೂರುಗೊಳಿಸಿದ್ದ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಿ ತೋರಿಸಿಕೊಡುವುದಾಗಿ ಮಾಜಿ ಶಾಸಕಿ ಶಕುಂತಳಾ ಟಿ ಶೆಟ್ಟಿ ಹೇಳಿದ್ದಾರೆ. ಕಬಕ-ವಿಟ್ಲ ರಸ್ತೆ ದುರಸ್ತಿಗೆ ಆಗ್ರಹಿಸಿ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಮತ್ತು ಕಬಕ ವಲಯ ಕಾಂಗ್ರೆಸ್ನ ಆಶ್ರಯದಲ್ಲಿ ಸಂಜೆ ಕಬಕದಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕಳೆದ ಅವಧಿಯಲ್ಲಿ ನಾನು ಮೆಡಿಕಲ್ ಕಾಲೇಜಿಗೆ 40 ಎಕ್ರೆ ಜಮೀನು ನೀಡಿದ್ದರೂ ಈಗಿನ ಶಾಸಕರು ಮೆಡಿಕಲ್ ಕಾಲೇಜು ಮಾಡುವ ಬದಲು ಮೀನು ವ್ಯಾಪಾರಕ್ಕೆ ಮುಂದಾಗಿದ್ದರು.ಇದಕ್ಕೆ ಎಲ್ಲಾ ವೈದ್ಯರುಗಳ ವಿರೋಧದಿಂದಾಗಿ ಕೈ ಬಿಟ್ಟಿದ್ದು ಜಾಗ ಉಳಿದಿದೆ.ಶಾಸಕಿಯಾಗಿ ನನ್ನ ಪ್ರಥಮ ಅವಧಿಯಲ್ಲಿ ದ.ಕ ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಪುತ್ತೂರಿಗೆ ಮಿನಿ ವಿಧಾನ ಸೌಧ ಮಂಜೂರುಗೊಳಿಸಿರುವುದಲ್ಲದೆ ನಂತರದ ನನ್ನ ಅವಧಿಯಲ್ಲಿಯೇ ಅದು ಪೂರ್ಣಗೊಂಡಿದೆ. ಕಳೆದ ಅವಧಿಯಲ್ಲಿ ನಾನು ಮಹಿಳಾ ಪದವಿ ಕಾಲೇಜಿಗೆ ರೂ.7 ಕೋಟಿ ಮಂಜೂರುಗೊಳಿಸಿದ್ದು ಅದಕ್ಕೆ ಇನ್ನೂ ಕಲ್ಲು ಹಾಕುವ ಕೆಲಸವಾಗಿಲ್ಲ ಎಂದರು.
ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಬಿಜೆಪಿಯವರು ಆಡಳಿತಕ್ಕೆ ಬಂದ ಬಳಿಕ ಯಾವುದು ಅಭಿವೃದ್ಧಿಯಾಗಿದೆ ಎಂಬುದನ್ನು ಪ್ರಶ್ನಿಸುವಂತಾಗಿದೆ.ಪ್ರಮುಖ ಅಭಿವೃದ್ಧಿ ಕೆಲಸಗಳು ಕಾಣುತ್ತಿಲ್ಲ.ಶಾಲಾ ಕೊಠಡಿ ಮಾಡಿಲ್ಲ. ಸಣ್ಣಪುಟ್ಟ ರಸ್ತೆಗಳನ್ನು ಮಾತ್ರ ಮಾಡುತ್ತಾರೆ.ಕಮಿಷನ್ ನುಂಗುವ ಉದ್ದೇಶಕ್ಕೆ ಕಾಮಗಾರಿಗಳನ್ನು ಕೆಆರ್ಡಿಸಿಎಲ್ಗೆ ನೀಡುತ್ತಾರೆ.ಅಲ್ಲಿ ಶಾಸಕರೇ ಗುತ್ತಿಗೆದಾರರನ್ನು ಕರೆದುಕೊಂಡು ಹೋಗಿ ಪರ್ಸಂಟೇಜ್ ಪಡೆದು ಟೆಂಡರ್ ಮಾಡದೇ ನೇರವಾಗಿ ಗುತ್ತಿಗೆ ನೀಡಲಾಗುತ್ತದೆ ಎಂದರು. ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ ಕೆ.ಬಿ ಮಾತನಾಡಿ, ಅಧಿಕಾರಕ್ಕೆ ಬಂದರೆ ಸ್ವಿಸ್ ಬ್ಯಾಂಕ್ ಹಣ ತಂದು ಹಂಚುತ್ತೇವೆ, ಚಿನ್ನದ ರಸ್ತೆ ನಿರ್ಮಾಣ ಮಾಡುತ್ತೇವೆ ಎಂದು ಹೇಳಿಕೆ ನೀಡಿದ್ದ ಬಿಜೆಪಿಯವರು ಕನಿಷ್ಠ ರಸ್ತೆ ಗುಂಡಿ ಮುಚ್ಚುವ ಕೆಲಸವಾದರೂ ಮಾಡಲಿ ಎಂದರು.