ಕುಂದಾಪುರ, ಫೆ 17(MSP): ಕೋಟದಲ್ಲಿ ನಡೆದ ಡಬ್ಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪರ ವಕೀಲರು ಸಲ್ಲಿಸಿದ ಜಾಮೀನು ಅರ್ಜಿ ವಿಚಾರಣೆಯ ಆದೇಶವನ್ನು ಕುಂದಾಪುರದ ಹೆಚ್ಚುವರಿ ಜೆಎಂಎಫ್ಸಿ ನ್ಯಾಯಾಲಯವು ಫೆ.19 ಕ್ಕೆ ಮುಂದೂಡಿದೆ.
ಜ.26 ರ ತಡರಾತ್ರಿ ನಡೆದ ಜೋಡಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ 16 ಆರೋಪಿಗಳ ಪೈಕಿ ಜಾಮೀನು ನೀಡುವಂತೆ ವಕೀಲರ ಮೂಲಕ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿರುವ ಮೂವರು ಆರೋಪಿಗಳ ಜಾಮೀನು ಅರ್ಜಿಯನ್ನು ವಜಾ ಮಾಡುವಂತೆ ಸಹಾಯಕ ಸರ್ಕಾರಿ ಅಭಿಯೋಜಕಿ ಸುಮಂಗಲ ನಾಯಕ್ ಶನಿವಾರ ವಾದ ಮಂಡಿಸಿದ್ದಾರೆ.
ಪ್ರಕರಣದಲ್ಲಿ ಆರೋಪಿಗಳಾಗಿರುವ ಪೊಲೀಸ್ ಸಿಬ್ಬಂದಿಗಳಾದ ಪವನ್ ಅಮೀನ್, ವಿರೇಂದ್ರ ಆಚಾರ್ಯ ಹಾಗೂ ಕಾಲೇಜು ವಿದ್ಯಾರ್ಥಿ ಪ್ರಣವ್ ರಾವ್ ಅವರಿಗೆ ಜಾಮೀನು ನೀಡುವಂತೆ ಮನವಿ ಸಲ್ಲಿಸಿದ್ದ ಹಿರಿಯ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ಶುಕ್ರವಾರ ಸಂಜೆ ಇಲ್ಲಿನ ಹೆಚ್ಚುವರಿ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಆರೋಪಿಗಳಿಗೆ ಜಾಮೀನು ನೀಡುವಂತೆ ವಾದ ಮಂಡಿಸಿದ್ದರು.
ಶನಿವಾರ ಪ್ರಾಸಿಕ್ಯೂಶನ್ ಪರವಾಗಿ ವಾದ ಮಂಡನೆ ಮಾಡಿದ ಎಪಿಪಿ ಸುಮಂಗಲ ನಾಯಕ್ ಅವರು ಪ್ರಕರಣ ನಡೆದ ಕೆಲವೇ ಸಮಯದ ಒಳಗೆ ಆರೋಪಿಗಳು ಪ್ರಕರಣದ ಇತರ ಆರೋಪಿಗಳಿಗೆ ವಿವಿಧ ರೀತಿಯಲ್ಲಿ ಸಹಕಾರ ನೀಡಿರುವುದನ್ನು ನೋಡಿದರೆ, ಸಾಕ್ಷಿ ನಾಶ ಹಾಗೂ ಆರೋಪಿಗಳು ತಪ್ಪಿಸಿಕೊಳ್ಳಲು ಸಹಕರಿಸಿದ್ದಾರೆ ಎನ್ನುವ ಆರೋಪಗಳಿಗೆ ಮಾತ್ರ ಸೀಮಿತವಾಗಿಲ್ಲ. ಪ್ರಕರಣದ ಒಳಸಂಚಿನಲ್ಲಿಯೂ ಭಾಗಿಯಾಗಿರುವ ಸಾಧ್ಯತೆಗಳಿವೆ. ಪ್ರಕರಣ ತನಿಖೆಯ ಹಂತದಲ್ಲಿ ಇದೆ. ಪೂರ್ಣ ಪ್ರಮಾಣದ ತನಿಖೆ ನಡೆದು ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಆರೋಪ ಪಟ್ಟಿಯನ್ನು ದಾಖಲಿಸಿದ ಬಳಿಕವಷ್ಟೇ ಪ್ರಕರಣದಲ್ಲಿ ಆರೋಪಿತರ ಪಾತ್ರ ಏನು ಎನ್ನುವುದು ಸ್ವಷ್ಟವಾಗುತ್ತದೆ. ಹಾಗಾಗಿ ಜಾಮೀನು ಅರ್ಜಿಯನ್ನು ವಜಾ ಮಾಡುವಂತೆ ಮನವಿ ಮಾಡಿದರು.
ಆರೋಪಿಗಳ ಪರ ಹಾಗೂ ಪ್ರಾಸಿಕ್ಯೂಶನ್ ಪರವಾಗಿ ನಡೆದ ವಾದಗಳನ್ನು ಆಲಿಸಿದ ಹೆಚ್ಚುವರಿ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶ ಶ್ರೀಕಾಂತ ಅರ್ಜಿಯ ಮೇಲೆ ಆದೇಶ ಮುಂದಕ್ಕೆ ಹಾಕಿದ್ದಾರೆ.