ಕಾರ್ಕಳ,ಅ 19(DaijiworldNews/MS): ಧೂಳುಮಯವಾಗಿರುವ ಮಂಗಳೂರು ರಸ್ತೆಯ ಸ್ಥಿತಿ-ಗತಿಯಿಂದಾಗಿ ಅಲ್ಲಿನ ವ್ಯಾಪಾರಸ್ಥರು ಅಸ್ತಮಾ ಕಾಯಿಲೆಯ ಭೀತಿಗೊಳಗಾಗಿದ್ದಾರೆ.
ಧೂಳುಮಯವಾದ ಕಾರ್ಕಳದ ಮಂಗಳೂರು ರಸ್ತೆ
ಪ್ರಸಕ್ತ ವರ್ಷಾವಧಿ ಮಳೆಯಿಂದಾಗಿ ರಸ್ತೆ ಪೂರ್ತಿ ಹೊಂಡ-ಗುಂಡಿಯಿಂದ ಕೂಡಿದ್ದು, ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಸಮಸ್ಯೆ ಮತ್ತಷ್ಟು ಬಿಗದಾಯಿಸಿದಾಗ ಪುರಸಭಾ ವ್ಯಾಪ್ತಿಯ ನಾಗರಿಕರು ಪಕ್ಷ ಭೇದ ಮರತು ಇದೇ ರಸ್ತೆಗಿಳಿದು ಹೋರಾಟ ನಡೆಸಿದ್ದರು. ರಸ್ತೆ ದುರಸ್ಥಿಗೆ ಒತ್ತಾಯಿಸಿ ಪುರಸಭಾ ಸದಸ್ಯರು ಸಾಮಾನ್ಯ ಸಭೆಯಲ್ಲೂ ವಿಚಾರ ಪ್ರಸ್ತಾಪಿಸಿದಲ್ಲದೇ ತರಿತ್ವಗತಿಯಲ್ಲಿ ಕ್ರಮಕೈಗೊಂಡು ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಒತ್ತಾಯಿಸಿದ್ದರು.
ಜಲ್ಲಿಪುಡಿಯೇ ಗತಿ...
ನಾಗರಿಕರ ಆಕ್ರೋಶವು ಹೆಚ್ಚುತ್ತಿದ್ದಂತೆ ಕಾರ್ಕಳ ಪುರಸಭಾ ಆಡಳಿತವು ಮಂಗಳೂರು ರಸ್ತೆಯ ಹೊಂಡ-ಗುಂಡಿಗಳಿಗೆ ಜಲ್ಲಿಪುಡಿ ಹಾಕುವ ಮೂಲಕ ಕಾರ್ಯ ದಕ್ಷತೆಯನ್ನು ಮೆರೆದಿತ್ತು.
ಮಳೆ ಕಡಿಮೆಯಾಗಿ ಬಿಸಿಲಿನ ತಾಪ ಹೆಚ್ಚುತ್ತಿದ್ದಂತೆ ಲಘು,ಘನ ವಾಹನಗಳ ಓಡಾಟಗಳಿಂದಾಗಿ ರಸ್ತೆಯ ಹೊಂಡಕ್ಕೆ ತುಂಬಿಸಲಾಗಿದ್ದ ಜಲ್ಲಿಪುಡಿಯ ಧೂಳು ಇಡೀ ರಸ್ತೆ ಮಾತ್ರವಲ್ಲ, ಸಮೀಪದ ಕಟ್ಟಡ, ಮನೆಗಳಿಗೂ ಪಸರಿಸಿಕೊಳ್ಳುತ್ತಿದೆ. ಮಾತ್ರವಲ್ಲದೇ ಇದೇ ರಸ್ತೆಯಾಗಿ ಪ್ರಯಾಣಿಸುವ ಹಾಗೂ ನಡೆದಾಡುವ ಸಾರ್ವಜನಿಕರಿ ಧೂಳಿನ ಗಾಳಿಯಿಂದಾಗಿ ಮೂಗು ಮುಚ್ಚಿಕೊಳ್ಳುವ ಪರಿಸ್ಥಿತಿ ಎದುರಾಗಿದೆ.
ಇದೇ ರಸ್ತೆಯಲ್ಲಿ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಅಂಗಡಿ ಮುಗ್ಗಟ್ಟುಗಳು ಧೂಳೂಮಯವಾಗಿ ವ್ಯಾಪಾರದಲ್ಲಿ ನಷ್ಟ ಅನುಭವಿಸುತ್ತಿದ್ದಾರೆ. ಧೂಳಿನ ಗಾಳಿಯನ್ನೇ ಕಳೆದ ಕೆಲ ತಿಂಗಳಿನಿಂದ ಸೇವಿಸುತ್ತಿರುವ ಕೆಲ ವ್ಯಾಪಾರಿಗಳ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುದೆ. ಅಸ್ತಮಾ ಕಾಯಿಲೆಗೂ ತುತ್ತಾಗಿರುವ ಅಘಾತಕಾರಿ ಮಾಹಿತಿ ತಿಳಿದುಬಂದಿದೆ.
ಕಾಂಕ್ರೀಟ್ಕರಣ ರಸ್ತೆ ನಿರ್ಮಾಣದಿಂದ ಪರಿಹಾರ
ಆನೆಕೆರೆಯಿಂದ ಮೂರುಮಾರ್ಗದ ವರೆಗಿನ ರಸ್ತೆಯನ್ನು ಕಾಂಕ್ರೀಟ್ಕರಣ ಮಾಡುವ ಮೂಲಕ ಹಲವು ವರ್ಷಗಳಿಂದ ಕಾಡುತ್ತಿರುವ ಸಮಸ್ಸೆಗೆ ಶಾಶ್ವತ ಪರಿಹಾರ ದೊರಕಲಿದೆ. ಈ ಕಾಮಗಾರಿಯ ಆರಂಭಕ್ಕೂ ಮುನ್ನಾ ರಸ್ತೆಯ ಇಕ್ಕಲೆಗಳಲ್ಲಿ ಚರಂಡಿ ವ್ಯವಸ್ಥೆಗಳು ಅವಶ್ಯಕವಿದೆ.
ವಾಹನಗಳ ಬಿಡಿಭಾಗಕ್ಕೂ ಸಂಚಕಾರ
ಇದೇ ರಸ್ತೆಯಲ್ಲಿ ಪ್ರತಿದಿನ ದ್ವಿಚಕ್ರ,ತ್ರಿಚಕ್ರ,ಲಘ ಹಾಗೂ ಘನವಾಹನಗಳು ಇದೇ ರಸ್ತೆಯಾಗಿ ಓಡಾಟ ನಡೆಸುತ್ತಿವೆ. ರಸ್ತೆ ಪೂರ್ತಿ ಭಾರೀ ಗಾತ್ರದ ಹೊಂಡಗಳಿಂದಾಗಿ ವಾಹನಗಳ ಸಂಚಾರಕ್ಕೆ ಅಡಚಣೆಯಾಗುತ್ತಿವೆ. ಕಿರಿದಾಗಿರುವ ಈ ರಸ್ತೆಯಲ್ಲಿ ನಡೆದಾಡಿಕೊಂಡು ಹೋಗುವ ಪಾದಚಾರಿಗಳಿಗೆ ಹೊಂಡದಲ್ಲಿ ತುಂಬಿಕೊಂಡಿರುವ ಕೆಸರು ನೀರಿನ ಅಭಿಷೇಕವಾಗುತ್ತಿರುವುದು ಸರ್ವೇ ಸಾಮಾನ್ಯವಾಗಿದೆ.
ಪುರಸಭೆಗೆ ಹಸ್ತಾಂತರಿ ಲೋಕೋಪಯೋಗಿ ಇಲಾಖೆ
ಭವಾನಿ ಮಿಲ್ನಿಂದ ಬಂಗ್ಲೆಗುಡ್ಡೆ ಜಂಕ್ಷನ್ ವರೆಗೆ ಬೈಪಾಸ್ ರಸ್ತೆಯನ್ನು ಲೋಕೋಪಯೋಗಿ ಇಲಾಖೆಯು ನಿರ್ಮಿಸಿದ ಬಳಿಕ ಅಂದರೆ ಸುಮಾರು 12 ವರ್ಷಗಳ ಹಿಂದೆ ಕಾರ್ಕಳದ ಕುಂಟಲ್ಪಾಡಿ -ಮೂರುಮಾರ್ಗದ ವರೆಗಿನ ರಸ್ತೆಯೂ ಕರ್ನಾಟಕ ಲೋಕೋಪಯೋಗಿ ಇಲಾಖೆಯ ಅಧೀನದಲ್ಲಿತ್ತು. ಇದರ ಮಧ್ಯೆ ಭಾಗದಲ್ಲಿ ಆನೆಕೆರೆಯಿಂದ ಮೂರುಮಾರ್ಗದ ವರೆಗೆ ಕಾಣಸಿಗುವ ರಸ್ತೆಯೇ ಮಂಗಳೂರು ರಸ್ತೆ.
ಲೋಕೋಪಯೋಗಿ ಇಲಾಖೆಯು ಈ ರಸ್ತೆಯನ್ನು ಕಾರ್ಕಳ ಪುರಸಭೆಗೆ ಹಸ್ತಾಂತರಿಸಿದ ನಂತರ ಅಭಿವೃದ್ಧಿಯಲ್ಲಿ ಭಾರೀ ಬದಲಾವಣೆಗಳು ಕಂಡುಬಂದಿಲ್ಲ.
ವ್ಯಾಪಾರಕ್ಕೆ ಕರಿಛಾಯೆ
ಮಳೆಗಾಳದಲ್ಲಿ ಕೆಸರು, ಬೇಸಿಗೆಯಲ್ಲಿ ಧೂಳುಮಯದೀಮದಾಗಿ ಮಂಗಳೂರು ರಸ್ತೆಯ ವ್ಯಾಪಾರಿಗಳ ಬದುಕಿಗೆ ಹೊಡೆತ ಬಿದ್ದಿದೆ. ಇದು ಪ್ರತಿವರ್ಷದ ಸಮಸ್ಯೆಯಾಗಿದೆ. --ರಾಜೇಂದ್ರಕುಮಾರ್ ವ್ಯಾಪಾರಸ್ಥರು
ಏತ ನೀರಾವರಿ ಯೋಜನೆಯ ಪೈಪ್ ಲೈನ್ ಹಾದು ಹೋಗಲಿದೆ
ಮಂಗಳೂರು ರಸ್ತೆಯ ಅಭಿವೃದ್ಧಿ ಕಾಮಗಾರಿಯೂ ಲೋಕೋಪಯೋಗಿ ಇಲಾಖೆಯ ಮೂಲಕ ನಡೆಯಲಿದೆ. ಹೊಂಡ ಗುಂಡಿಗಳಿಂದಾಗಿ ಆ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಸಾಧ್ಯವಾದ ಹಿನ್ನಲ್ಲೆಯಲ್ಲಿ ರಸ್ತೆಯ ಹೊಂಡ ಮುಚ್ಚುವ ಕಾಮಗಾರಿಯನ್ನು ಕಾರ್ಕಳ ಪುರಸಭೆ ವಹಿಸಿಕೊಂಡಿತ್ತು. ಏತನೀರಾವರಿ ಯೋಜನೆಯ ಪೈಪ್ ಲೈನ್ ಮೂರು ಮಾರ್ಗದಿಂದ ಆನೆಕೆರೆಯಾಗಿ ಹಾದು ಹೋಗಲಿದೆ. ಇದರಿಂದಾಗಿ ಇತರ ಅಭಿವೃದ್ಧಿ ಕಾಮಗಾರಿ ನಡೆಯಲು ಒಂದಿಷ್ಟು ವಿಳಂಬವಾಗಿದೆ. -ರೂಪಾ ಶೆಟ್ಟಿ ಪುರಸಭಾ ಮುಖ್ಯಾಧಿಕಾರಿ ,ಕಾರ್ಕಳ
ವರದಿ: ಆರ್.ಬಿ.ಜಗದೀಶ್