ಮಂಗಳೂರು, ಅ 19 (DaijiworldNews/HR): ಸುರತ್ಕಲ್ ಟೋಲ್ ಗೇಟ್ ಸ್ಥಾಪನೆಗೆ ಮೊದಲು ವಿರೋಧ ವ್ಯಕ್ತಪಡಿಸಿದ್ದು ಬಿಜೆಪಿಯೇ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಮಂಗಳವಾರ ನಡೆದ ಬೃಹತ್ ಪ್ರತಿಭಟನೆಗೆ ಪ್ರತಿಕ್ರಿಯಿಸಿದ ನಳಿನ್, ಸುರತ್ಕಲ್ ಟೋಲ್ ಗೇಟ್ ತೆರವಿಗೆ ಯಾವುದೇ ತೊಂದರೆ ಇಲ್ಲ, ಟೋಲ್ ಗೇಟ್ ಸ್ಥಾಪನೆಯಾದಾಗ ಮೊದಲು ನಮ್ಮ ಪಕ್ಷವೇ ವಿರೋಧ ವ್ಯಕ್ತಪಡಿಸಿದ್ದು, ತಾಂತ್ರಿಕ ಸಮಸ್ಯೆಯಿಂದ ಟೋಲ್ ಗೇಟ್ ತೆಗೆಯಲು ವಿಳಂಬವಾಗಿದೆ, ನಾವು 20 ದಿನಗಳ ಕಾಲಾವಕಾಶ ಕೇಳಿದ್ದೇವೆ, ಆದರೆ ಕಾನೂನನ್ನು ಕೈಗೆ ತೆಗೆದುಕೊಂಡು ಇಂತಹ ಪ್ರತಿಭಟನೆಗಳನ್ನು ನಡೆಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದರು.
ಎನ್ಐಟಿಕೆ ಬಳಿ ಎನ್ಎಚ್-66ರಲ್ಲಿ ಇರುವ ಸುರತ್ಕಲ್ ಟೋಲ್ ಗೇಟನ್ನು ತೆಗೆದುಹಾಕಲು ಕೇಂದ್ರ ಬದ್ಧವಾಗಿದೆ. 2013ರಲ್ಲಿ ಟೋಲ್ ಪ್ಲಾಜಾ ಸ್ಥಾಪಿಸಿದಾಗ ನಾಗರಿಕ ಹಿತರಕ್ಷಣಾ ವೇದಿಕೆ ವಿರೋಧಿಸಿತ್ತು. 2019 ರಲ್ಲಿ ತಲಪಾಡಿ ಮತ್ತು ಹೆಜಮಾಡಿಯಲ್ಲಿ ಟೋಲ್ ಗೇಟ್ಗಳನ್ನು ಹಾಕಲಾಯಿತು. ಟೋಲ್ ಗೇಟ್ ಸ್ಥಾಪಿಸಿದಾಗ ಹೆದ್ದಾರಿಯನ್ನು ಬಿಒಟಿ (ನಿರ್ಮಾಣ, ನಿರ್ವಹಣೆ ಮತ್ತು ವರ್ಗಾವಣೆ) ಆಧಾರದ ಮೇಲೆ ಅಭಿವೃದ್ಧಿಪಡಿಸಲಾಯಿತು ಎಂದಿದ್ದಾರೆ.
ಇನ್ನು ಸುರತ್ಕಲ್ ಟೋಲ್ ಗೇಟ್ ತೆರವು ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಹಲವು ಬಾರಿ ಸಭೆ ನಡೆಸಿದ್ದೇನೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಟೋಲ್ ಗೇಟ್ ತೆಗೆದುಹಾಕುವುದಾಗಿ ಲೋಕಸಭೆಯ ಸದಸ್ಯರಿಗೆ ಭರವಸೆ ನೀಡಿದ್ದಾರೆ ಎಂದರು.
ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದು ಸರಿಯಲ್ಲ. ಆದರೆ ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ನಡೆಸುವುದರಲ್ಲಿ ತಪ್ಪೇನಿಲ್ಲ ಆದರೆ ಅದು ಶಾಂತಿಯುತವಾಗಿ ನಡೆಯಬೇಕೇ ಹೊರತು ಕಾನೂನನ್ನು ಕೈಗೆತ್ತಿಕೊಳ್ಳದೆ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದ್ದಾರೆ.