ಮುಲ್ಕಿ, ಅ 19 (DaijiworldNews/HR): ಉಡುಪಿಯ ಕುಂದಾಪುರ ಮೂಲದ ವೃದ್ಧ ಭಿಕ್ಷುಕಿಯೊಬ್ಬರು ಬೇಡಿ ಸಂಗ್ರಹಿಸಿದ ಹಣವನ್ನು ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಭೇಟಿ ನೀಡಿ ಮಧ್ಯಾಹ್ನದ ಅನ್ನದಾನ ನಿಧಿಗೆ ಸಮರ್ಪಿಸಿದ್ದಾರೆ.
ಅಶ್ವಥಮ್ಮ ಎಂಬವರು ಸೋಮವಾರ ದೇಗುಲಕ್ಕೆ 1 ಲಕ್ಷರೂ ಹಣವನ್ನು ಸಂಗ್ರಹಿಸಿದ್ದು, ಮೂಲತಃ ಉಡುಪಿಯ ಕುಂದಾಪುರ ಮೂಲದ ವಯೋವೃದ್ದೆಯಾಗಿರುವ ಅಶ್ವಥಮ್ಮ ಅವರು ಅಯ್ಯಪ್ಪ ಸ್ವಾಮೀಯ ದೊಡ್ಡ ಅಯ್ಯಪ್ಪ ಭಕ್ತೆಯಾಗಿದ್ದಾರೆ.
ಇನ್ನು ವಿಶೇಷವೆಂದರೆ ಅವರು ಪ್ರತಿ ನಿತ್ಯ ವಿವಿಧ ದೇವಸ್ಥಾನಗಳಲ್ಲಿ ಬೇಡಿ ನಿಧಿ ಸಂಗ್ರಹಿಸಿ ಅದನ್ನು ತಾನು ಬಳಸದೆ ವಿವಿಧ ದೇವಾಲಯಗಳ ಅನ್ನದಾನ ನಿಧಿಗೆ ಸಮರ್ಪಿಸುತ್ತಾರೆ. ಈಗಾಗಲೇ ಅವಿಭಜಿತ ದ.ಕ ಜಿಲ್ಲೆಯ ಹಲವು ದೇವಾಲಯಗಳಿಗೆ ಅವರು ದೇಣಿಗೆಯನ್ನು ನೀಡಿದ್ದಾರೆ.
ದೇವಾಲಯದಲ್ಲಿ ಭಜಕರೆದುರು ಕೈಚಾಚಿ ಕೊಟ್ಟಷ್ಟನ್ನು ಸಂತೋಷ ಪೂರ್ವಕವಾಗಿ ಮೌನದಿಂದ ಸ್ವೀಕರಿಸಿ ಕೈ ಎತ್ತಿ ಆಶೀರ್ವಾದ ನೀಡುವ ಅಶ್ವಥಮ್ಮ ಎಂದರೆ ಎಲ್ಲರಿಗೂ ಅಚ್ಚುಮೆಚ್ಚಿನವರಾಗಿದ್ದಾರೆ. ಏಕಾಂಗಿಯಾಗಿರುವ ಅವರ ಸೇವೆ ಇತರರಿಗೆ ಮಾದರಿಯಾಗಿದೆ. ಬಪ್ಪನಾಡು ದೇವಸ್ಥಾನದ ಆಡಳಿತ ಮೊಕ್ತೇಸರ ಮನೋಹರ ಶೆಟ್ಟಿಯವರು ಅಶ್ವಥಮ್ಮರವರಿಂದ ಸಹಾಯಧನ ಸ್ವೀಕರಿಸಿದರು.
ಈ ಸಂದರ್ಭ ಶಿವಶಂಕರ್ ವರ್ಮ, ಪ್ರಸಾದ್ ಭಟ್, ಕಾರ್ತಿಕ್ ಕೋಟ್ಯಾನ್ ಮತ್ತಿತರು ಇದ್ದರು.