ಉಳ್ಳಾಲ, ಅ 18 (DaijiworldNews/HR): ಕೋಮು ಸಾಮರಸ್ಯ ಉಳಿಸುವ ಉದ್ದೇಶದಿಂದ ದೇಶದಾದ್ಯಂತ ಶಾಂತಿ, ಸೌಹಾರ್ದತೆಯ ಸಂದೇಶವನ್ನು ಸಮಾಜಕ್ಕೆ ಮುಟ್ಟಿಸುವ ಉದ್ದೇಶದೊಂದಿಗೆ ಮುಸ್ಲಿಂ ಲೀಗ್ ಪಕ್ಷ ಕ್ಯಾಂಪೇನ್ ಹಮ್ಮಿಕೊಂಡಿದೆ, ಇದಕ್ಕೆ ಕರ್ನಾಟಕ ಜನತೆಯ ಬೆಂಬಲ ಸಂಪೂರ್ಣ ಬೇಕಿದೆ ಎಂದು ಮುಸ್ಲಿಂ ಲೀಗ್ ರಾಷ್ಟ್ರೀಯ ಪೊಲೆಟಿಕಲ್ ಅಫೇರ್ಸ್ ಎಂಡ್ ಕೇರಳ ರಾಜ್ಯಾಧ್ಯಕ್ಷ ಸಯ್ಯದ್ ಮುಹಮ್ಮದ್ ಆಲಿ ಶಿಹಾಬ್ ತಂಙಳ್ ಅವರು ರಾಷ್ಟ್ರೀಯ ಮಿಷನ್ ಕರ್ನಾಟಕ ಹೆಸರಿನಡಿ ರಾಜ್ಯದಾದ್ಯಂತ ಧರ್ಮ ಸೌಹಾರ್ದ, ಶಾಂತಿಗಾಗಿ ಮುಸ್ಲಿಂ ಯೂತ್ ಲೀಗ್ ನಡೆಸಲಿರುವ ಪ್ರಚಾರ ಆಂದೋಲನದ ಬ್ಯಾನರ್ ಅನ್ನು ತಲಪಾಡಿ ಟೋಲ್ ಗೇಟ್ ಹತ್ತಿರ ಉದ್ಘಾಟನೆ ನಡೆಸಿ ಮಾತನಾಡಿದ್ದಾರೆ.
ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ಸಿ.ಕೆ. ಝುಬೇರ್ ಮಾತನಾಡಿ, ಕೋಮು ಸೌಹಾರ್ದತೆಯನ್ನು ಅಸ್ತಿತ್ವಕ್ಕೆ ತರುವ ಉದ್ದೇಶದಿಂದ ಕ್ಯಾಂಪೇನ್ ನಡೆಯುತ್ತಿದೆ. ಈವರೆಗೆ ಕೇರಳದಲ್ಲಿ 17 ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಧಾರ್ಮಿಕ ಮುಖಂಡರು ಹಾಗೂ ರಾಜಕೀಯ ನೇತಾರರು ಜತೆಗೂಡಿ ಎಲ್ಲರೂ ದ್ವೇಷ ರಾಜಕಾರಣ ವಿರುದ್ಧ ದನಿ ಎತ್ತಿದ್ದರು. ಕರ್ನಾಟಕ ರಾಜ್ಯ ರಾಜಕಾರಣ ಸಂಪೂರ್ಣ ಮಲಿನಗೊಂಡಿದೆ. ರಾಜ್ಯದ ಉದ್ದಕ್ಕೂ ದ್ವೇಷ ರಾಜಕಾರಣವನ್ನು ಸರಕಾರ ಬಿತ್ತಿ ಹಾಕಿದೆ. ಭಾರತವನ್ನು ಸಶಕ್ತಗೊಳಿಸಲು ಹಾಗೂ ಯುವಸಮುದಾಯಕ್ಕೆ ಶಿಕ್ಷಣ ಒದಗಿಸುವ ಉದ್ದೇಶದೊಂದಿಗೆ ಕ್ಯಾಂಪೇನ್ ನಡೆಸಲಾಗುತ್ತಿದೆ. ಈ ಮೂಲಕ ಗ್ರಾಮೀಣ ಭಾರತದ ಅಭಿವೃದ್ಧಿ ಹಾಗೂ ಬಡತನ ನಿರ್ಮೂಲನೆಯ ಉದ್ದೇಶ ಹೊಂದಿದೆ. ಧರ್ಮದ ನಿರ್ಬಂಧವಿಲ್ಲದೆ ಎಲ್ಲರೂ ಜತೆಗೂಡಿ ಸಹೋದರತೆಯಿಂದ ಪಕ್ಷದಲ್ಲಿ ಪಾಲ್ಗೊಳ್ಳಬಹುದು. 2023 ಮಾ.10ಕ್ಕೆ 75ರ ಸಂಭ್ರಮವನ್ನು ಪಕ್ಷ ಆಚರಿಸಲಿದೆ. ಚೆನೈನ ರಾಜಾಜಿನಗರದಲ್ಲೇ 75 ವರ್ಷದ ಹಿಂದೆ ಹುಟ್ಟಿದ ಪಕ್ಷದ 75ರ ಸಂಭ್ರಮವನ್ನು ಅಲ್ಲೇ ಆಚರಿಸಲಿದ್ದೇವೆ ಎಂದರು.
ಮುಸ್ಲಿಂ ಲೀಗ್ ಕರ್ನಾಟಕ ರಾಜ್ಯ ಅಧ್ಯಕ್ಷ ಸಿದ್ದೀಖ್ ತಲಪಾಡಿ ಮಾತನಾಡಿ, ಕರ್ನಾಟಕ ರಾಜ್ಯದ ಜಿಲ್ಲೆ ಹಾಗೂ ತಾಲೂಕುಗಳಿಗೆ ಭೇಟಿ ನೀಡಿ ಸಂದೇಶವನ್ನು ಸಾರಲಿದೆ. ಸಹೋದರತ್ವವೇ ಧರ್ಮ, ಶಾಂತಿಗಾಗಿ ಧರ್ಮ ಉದ್ದೇಶದೊಂದಿಗೆ ದೇಶದಾದ್ಯಂತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರ ಭಾಗವಾಗಿ ರಾಜ್ಯಾಧ್ಯಕ್ಷರು ಮಂಗಳೂರಿಗೆ ಆಗಮಿಸುವ ಸಂದರ್ಭ ಸ್ವಾಗತಿಸಲಾಗಿದೆ ಎಂದರು.
ಇನ್ನು ಮಂಜೇಶ್ವರ ಬ್ಲಾಕ್ ಅಧ್ಯಕ್ಷ ಸೈಫುಲ್ಲಾ ತಂಗಳ್ ಮಾತನಾಡಿ, ದ್ವೇಷದ ರಾಜಕೀಯವನ್ನು ಎದುರಿಸಲು ಹಮ್ಮಿಕೊಂಡಿರುವ ಕ್ಯಾಂಪೇನ್ ಇದಾಗಿದೆ. ಮೊದಲ ಆರಂಭ ತಲಪಾಡಿಯಲ್ಲಿ ನಡೆದಿದೆ. ಸಹೋದರತೆಯಿಂದ ಉದ್ಯಾವರ ಮಾಡದಲ್ಲಿ ಆಚರಿಸಲ್ಪಡುತ್ತಿರುವ ಜಾತ್ರೋತ್ಸವ ಜಗತ್ತಿಗೆ ಮಾದರಿ, ಸಾಮರಸ್ಯ ಪ್ರದೇಶವಾಗಿರುವ ಮಂಜೇಶ್ವರ ಭಾಗದಲ್ಲಿ ನಡೆಸಲ್ಪಡುವ ಕಾರ್ಯಕ್ರಮವಾಗಿದೆ ಎಂದರು.
ಈ ಸಂದರ್ಭ ಲೀಗ್ ಮುಖಂಡರುಗಳಾದ ಮುಜೀಬ್ ತಲಂಗರೆ, ಗ್ರಾಮ ಪಂಚಾಯತ್ ಸದಸ್ಯ ಅಶ್ರಫ್, ಅಫಾಮ್ ಆಲಿ ತಂಗಳ್, ಎಚ್.ಎಂ. ಹನೀಫ್ ತೋಡಾರ್, ಹಿದಾಯತ್ ಮಾರಿಪಲ್ಲ ಮುಂತಾದವರು ಉಪಸ್ಥಿತರಿದ್ದರು.
ಕೇರಳ ರಾಜ್ಯಾಧ್ಯಕ್ಷ ಸಯ್ಯದ್ ಮುಹಮ್ಮದ್ ಆಲಿ ಶಿಹಾಬ್ ತಂಙಳ್ ಇವರು ಬ್ಯಾನರ್ ಅನ್ನು ಕರ್ನಾಟಕ ರಾಜ್ಯಾಧ್ಯಕ್ಷ ಸಿದ್ದೀಖ್ ತಲಪಾಡಿ ಅವರಿಗೆ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು.