ಬಂಟ್ವಾಳ, ಅ 17 (DaijiworldNews/SM): ಉಡುಪಿ-ಕಾಸರಗೋಡು 400 ಕೆವಿ ವಿದ್ಯುತ್ ಲೈನ್ ದ.ಕ.ಜಿಲ್ಲೆಯ ಅರಣ್ಯ ಇಲಾಖೆಯ ಜಮೀನಿನ ಮೂಲಕ ಹಾದು ಹೋಗುವ ಪ್ರದೇಶದಲ್ಲಿ ಕೇಂದ್ರ ಹಾಗೂ ರಾಜ್ಯ ಅರಣ್ಯ ಇಲಾಖೆಯ ಅಧಿಕಾರಿ ವರ್ಗ, ಸ್ಟೆರ್ಲೈಟ್ ಕಂಪೆನಿಯ ಅಧಿಕಾರಿಗಳು ಹಲವೆಡೆ ಪರಿಶೀಲನೆ ನಡೆಸಿದ್ದು, ಈ ತಂಡ ವೀರಕಂಭಕ್ಕೆ ಆಗಮಿಸಿದ ಸಂದರ್ಭದಲ್ಲಿ ಸ್ಥಳೀಯ ರೈತರಿಂದ ಆಕ್ರೋಶ ವ್ಯಕ್ತವಾಯಿತು.
ಗ್ರಾಮದ ರೈತರು, ವೀರಕಂಭ ಗ್ರಾ.ಪಂ.ಜನಪ್ರತಿನಿಧಿಗಳು, ರಾಜ್ಯ ರೈತ ಸಂಘ-ಹಸಿರು ಸೇನೆಯ ಪ್ರಮುಖರು ಹಾಗೂ ವಿಟ್ಲ ರೈತ ಹೋರಾಟ ಸಮಿತಿಯವರು ವೀರಕಂಭದಲ್ಲಿರುವ ಬಂಟ್ವಾಳ ಸಾಮಾಜಿಕ ವಲಯ ಅರಣ್ಯಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.
ರಾಜ್ಯ ರೈತ ಸಂಘ-ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ ಅವರು ಮಾತನಾಡಿ, ಅಭಿವೃದ್ಧಿ ಹೆಸರಿನಲ್ಲಿ ಜಿಲ್ಲಾಧಿಕಾರಿಗಳು ದ.ಕ.ಜಿಲ್ಲೆಯ ಹಲವು ಗ್ರಾಮಗಳ ರೈತರ ಜಮೀನನ್ನು ಬಲಿಕೊಟ್ಟು 400 ಕೆವಿ ವಿದ್ಯುತ್ ಮಾರ್ಗ ಅನುಷ್ಠಾನಕ್ಕೆ ಅವಕಾಶ ನೀಡಿದ್ದು, ಕಂಪೆನಿಯ ಬಾಲಂಗೋಚಿಯಂತೆ ವರ್ತಿಸುತ್ತಿದ್ದಾರೆ. ಈ ಕುರಿತು ಈಗಾಗಲೇ ನಾವು ನ್ಯಾಯಾಲಯದಲ್ಲಿ ದಾವೆಯನ್ನೂ ಹೋಡಿದ್ದೇವೆ. ಕೊಡಗಿನ ರೀತಿಯಲ್ಲಿ ಜಿಲ್ಲೆಯ ಎಲ್ಲಾ ಶಾಸಕರು, ಸಂಸದರಿಗೆ ಯೋಜನೆ ಅನುಷ್ಠಾನಕ್ಕೆ ಅವಕಾಶ ನೀಡಬಾರದು ಎಂದರು. ವಿಟ್ಲ ರೈತ ಹೋರಾಟ ಸಮಿತಿಯ ಅಧ್ಯಕ್ಷ ರಾಜೀವ ಗೌಡ ಮಾತನಾಡಿ, ಯೋಜನೆಯ ವಿರುದ್ಧ ನಾವು ನಿರಂತರವಾಗಿ ೧೫ ತಿಂಗಳಿನಿಂದ ಹೋರಾಟ ಮಾಡುತ್ತಿದ್ದು, ಬಡ ರೈತರ ಕೃಷಿ ಭೂಮಿಯ ಮೇಲೆ ಇವರ ಕಣ್ಣು ಬಿದ್ದಿದೆ ಎಂದರು. ಅರಣ್ಯ ಇಲಾಖೆಯ ಬೆಂಗಳೂರಿನ ಎಐಜಿಎಫ್ ಅಂಜನ್ ಅವರು ಮಾತನಾಡಿ, ತಮ್ಮ ಮನವಿಯನ್ನು ನೀಡಿ ಅದನ್ನು ಸರಕಾರದ ಬಳಿಗೆ ತಲುಪಿಸುವುದಾಗಿ ತಿಳಿಸಿದರು. ಯೋಜನೆಗೆ ವಿರೋಧ ವ್ಯಕ್ತಪಡಿಸಿ ಎಐಜಿಎಫ್ ಅಂಜನ್ ಹಾಗೂ ಡಿಸಿಎಫ್ ದಿನೇಶ್ಕುಮಾರ್ ವೈ.ಕೆ. ಅವರಿಗೆ ರೈತರು ಮನವಿ ನೀಡಿದರು.
ಮಂಗಳೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎನ್.ಸುಬ್ರಹಣ್ಯ ರಾವ್, ಬಂಟ್ವಾಳ ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ್, ಸಮಾಜಿಕ ವಲಯ ಅರಣ್ಯಾಧಿಕಾರಿ ರವಿಕುಮಾರ್, ವೀರಕಂಭ ಗ್ರಾ.ಪಂ.ಅಧ್ಯಕ್ಷ ದಿನೇಶ್, ಉಪಾಧ್ಯಕ್ಷೆ ಶೀಲಾ ನಿರ್ಮಲ ವೇಗಸ್, ಸದಸ್ಯರಾದ ಜನಾರ್ದನ ಪೂಜಾರಿ, ರಘು ಪೂಜಾರಿ, ಅಬ್ದುಲ್ ರಹಿಮಾನ್, ಜಯಪ್ರಸಾದ್, ಸಂದೀಪ್, ಅರಣ್ಯ ಇಲಾಖೆ ಸಿಬಂದಿ ಪ್ರೀತಮ್ ಎಸ್, ಶೋಬಿತ್, ದಯಾನಂದ್, ರಂಜಿತಾ ಮೊದಲಾವರಿದ್ದರು.