ಮಂಗಳೂರು, ಅ 17 (DaijiworldNews/DB): ದಾಯ್ಜಿವರ್ಲ್ಡ್ ಟಿವಿ 24*7 ಚಾನೆಲ್ನಲ್ಲಿ ಯಶಸ್ವಿಯಾಗಿ ಪ್ರಸಾರವಾಗುತ್ತಿರುವ ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್ ಮತ್ತು ದಾಯ್ಜಿವರ್ಲ್ಡ್ ಸಂಸ್ಥಾಪಕ ವಾಲ್ಟರ್ ನಂದಳಿಕೆ ಅವರ ತುಳು ಹಾಸ್ಯ ಕಾರ್ಯಕ್ರಮ 'ಪ್ರೈವೆಟ್ ಚಾಲೆಂಜ್' ಇನ್ನು ಮುಂದೆ ರಾಷ್ಟ್ರೀಯ ಡಿಜಿಟಲ್ ವೇದಿಕೆಗಳಲ್ಲಿ ಪ್ರದರ್ಶನಗೊಳ್ಳಲಿದೆ. ಎಂಎಕ್ಸ್ ಪ್ಲೇಯರ್, ಏರ್ಟೆಲ್ ಎಕ್ಸ್ಟ್ರೀಂ, ವಿಐ ಮೂವೀಸ್ (ವೊಡಾಫೋನ್ ಐಡಿಯಾ), ಮತ್ತು ಹಂಗಾಮ ಪ್ಲೇನಂತಹ ಪ್ರಸಿದ್ದ ಒಟಿಟಿ ಪ್ಲ್ಯಾಟ್ಫಾರ್ಮ್ಗಳಲ್ಲಿ ಪ್ರೈವೆಟ್ ಚಾಲೆಂಜ್ ಕಾರ್ಯಕ್ರಮ ಲಭ್ಯವಾಗಲಿದೆ. ಅಲ್ಲದೆ ರಾಷ್ಟ್ರೀಯ ಮಟ್ಟದ ಡಿಜಿಟಲ್ ಪ್ಲಾಟ್ಫಾರ್ಮ್ಗಳಲ್ಲಿ ಸ್ಟ್ರೀಮ್ ಮಾಡಿದ ಮೊದಲ ತುಳು ಭಾಷೆಯ ಪ್ರದರ್ಶನ ಎಂಬ ಹೆಗ್ಗಳಿಕೆಗೆ ಪ್ರೈವೆಟ್ ಚಾಲೆಂಜ್ ಕಾರ್ಯಕ್ರಮ ಪಾತ್ರವಾಗಲಿದೆ.
ಕವಿತಾ ಶೆಟ್ಟಿ
ಮಂಗಳೂರು ಮೂಲದ ಕವಿತಾ ಶೆಟ್ಟಿ ನೇತೃತ್ವದ ಮೂವಿಟೋನ್ ಡಿಜಿಟಲ್ ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್ ಎಂಬ ಮುಂಬೈ ಮೂಲದ ಕಂಪನಿಯು ತುಳು ಭಾಷೆಯ ಮನರಂಜನಾ ಪ್ರದರ್ಶನವನ್ನು ಒಟಿಟಿ ಪ್ಲ್ಯಾಟ್ಫಾರ್ಮ್ನಲ್ಲಿ ನೋಡುವಂತಾಗಲು ಅವಕಾಶ ಕಲ್ಪಿಸಿದೆ. ಈ ಕಂಪೆನಿಯು 2014ರಲ್ಲಿ ಸ್ಥಾಪನೆಗೊಂಡಿದ್ದು, ಕಳೆದ 9 ವರ್ಷಗಳಿಂದ ಕಂಟೆಂಟ್ಗಳನ್ನು ಒಗ್ಗೂಡಿಸುವ ಮತ್ತು ವಿತರಿಸುವ ಕೆಲಸವನ್ನು ಮಾಡುತ್ತಿದೆ. ಒಟಿಟಿ ಫ್ಲಾಟ್ಫಾರ್ಮ್ಗಳಲ್ಲಿ ತುಳು ಭಾಷೆಯ ಮನರಂಜನಾ ವಿಷಯಗಳನ್ನು ಪ್ರದರ್ಶಿಸಲು ಸಾಧ್ಯವಾಗದಿದ್ದಾಗ ಮೂವಿಟೋನ್ ಡಿಜಿಟಲ್ ಸಂಸ್ಥೆಯು ಅದನ್ನು ಮಾಡಿ ತೋರಿಸಿದೆ.
"ಈವರೆಗೆ ಯೂಟ್ಯೂಬ್ ಮತ್ತು ಫೇಸ್ಬುಕ್ ಸಾಮಾಜಿಕ ತಾಣಗಳು ಪ್ರೈವೆಟ್ ಚಾಲೆಂಜ್ನ ಮುಖ್ಯ ಸ್ಕ್ರೀಮಿಂಗ್ ಸೌಲಭ್ಯವಾಗಿತ್ತು. ಆದರೆ ಇದೇ ಮೊದಲ ಬಾರಿಗೆ ಅರವಿಂದ್ ಬೋಳಾರ್ ಮತ್ತು ವಾಲ್ಟರ್ ನಂದಳಿಕೆ ಅಭಿನಯದ ತುಳು ವೆಬ್ ಸರಣಿ ಪ್ರೈವೆಟ್ ಚಾಲೆಂಜ್ ಒಟಿಟಿ ಪ್ಲಾಟ್ಫಾರ್ಮ್ಗಳಾದ ಎಂಎಕ್ಸ್ ಪ್ಲೇಯರ್, ಹಂಗಾಮಾ ಪ್ಲೇ, ವಿಐ ಮೂವೀಸ್ (ವೊಡಾಫೋನ್ ಐಡಿಯಾ) ಮತ್ತು ಏರ್ಟೆಲ್ ಎಕ್ಸ್ಸ್ಟ್ರೀಮ್ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ವಿಶ್ವಾದ್ಯಂತ ವಾಸಿಸುವ ತುಳು ಭಾಷಿಗರಿಗೆ ಇದೊಂದು ಹೆಮ್ಮೆಯ ಕ್ಷಣವಾಗಿದೆ" ಎಂದು ಒಟಿಟಿ ಪ್ಲಾಟ್ಫಾರ್ಮ್ಗಳಲ್ಲಿ ಈ ಕಾರ್ಯಕ್ರಮದ ಸ್ಕ್ರೀಮಿಂಗ್ ಲಭ್ಯವಾಗುವಂತೆ ಮಾಡಿದ ಕವಿತಾ ಶೆಟ್ಟಿ ಹೇಳುತ್ತಾರೆ.
ವಿಶ್ವಾದ್ಯಂತ ಇರುವ ದೊಡ್ಡ ಸಂಖ್ಯೆಯ ಪ್ರೇಕ್ಷಕರಿಗೆ ತುಳು ಭಾಷೆ ಲಭ್ಯವಾಗುವ ನಿಟ್ಟಿನಲ್ಲಿ ಈ ಕ್ರಮವನ್ನು ಮೂವಿಟೋನ್ ಡಿಜಿಟಲ್ ಸಂಸ್ಥೆಯು ಕೈಗೊಂಡಿದೆ. ಜೊತೆಗೆ ಈ ಭಾಷೆಯ ವಿಷಯ ರಚನೆಕಾರರನ್ನು ವಿಶ್ವಾದ್ಯಂತ ಎಲ್ಲಾ ಭಾಗಗಳಲ್ಲಿ ಗುರುತಿಸುವಂತಾಗಬೇಕು ಎಂಬುದು ಉದ್ದೇಶ. ಭಾರತ ಸರ್ಕಾರವು ಭಾಷೆಯನ್ನು ಗುರುತಿಸಿದಾಗ ಒಟಿಟಿ ಪ್ಲಾಟ್ಫಾರ್ಮ್ಗಳು ಕೂಡಾ ಸ್ಥಳೀಯ ಅಂಶಗಳನ್ನು ಪ್ರಶಂಸಿಸಬೇಕು.
ಎಲ್ಲಾ ಒಟಿಟಿ ಪ್ಲಾಟ್ಫಾರ್ಮ್ಗಳಿಗೆ ಪ್ರಮುಖ ವಿತರಕಾ ಕಂಪೆನಿಯಾಗಿ ಮೂವಿಟೋನ್ ಡಿಜಿಟಲ್ ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್ ತೊಡಗಿಸಿಕೊಂಡಿದೆ. ಆನ್ಕ್ಲಿಕ್ ಮ್ಯೂಸಿಕ್ ಎಂಬ ಸಂಗೀತ ಲೇಬಲ್ ಬ್ರಾಂಡ್ನ್ನೂ ಈ ಕಂಪೆನಿ ಹೊಂದಿದ್ದು, ಬಹುಭಾಷಾ ಚಲನಚಿತ್ರ ಮತ್ತು ಇತರ ಸಂಗೀತಗಳನ್ನು ಇದೇ ಬ್ರಾಂಡ್ ಅಡಿಯಲ್ಲಿ ಪ್ರದರ್ಶಿಸುತ್ತದೆ. ಆನ್ಮ್ಯೂಸಿಕ್ ಲೇಬಲ್ ಅಡಿಯಲ್ಲಿ ಮರಾಠಿ ಚಲನಚಿತ್ರ 'ಮೀ ವಸಂತರಾವ್' ಸಂಗೀತಕ್ಕಾಗಿ 2022ರಲ್ಲಿ ಎರಡು ರಾಷ್ಟ್ರ ಪ್ರಶಸ್ತಿ ಗೆದ್ದಿರುವುದು ಸಂಸ್ಥೆಯ ಸಾಧನೆ. ಇನ್ನು ಒಂದೇ ಡ್ಯಾಶ್ಬೋರ್ಡ್ನಡಿಯಲ್ಲಿ ವರದಿಗಳು, ಆದಾಯ ಮತ್ತು ಒಂದೇ ಕ್ಲಿಕ್ ಪ್ರಚಾರ ಲಿಂಕ್ಗಳನ್ನು ಪ್ರದರ್ಶಿಸಲು ಎಲ್ಲಾ ಕಂಟೆಂಟ್ ಪಾಲುದಾರರಿಗೆ ಡ್ಯಾಶ್ಬೋರ್ಡ್ನ್ನು ಈ ಕಂಪೆನಿ ಒದಗಿಸುತ್ತದೆ.
2020-2021ರಲ್ಲಿ ಕೊರೊನಾ ಪ್ರಕರಣಗಳಿಂದಾಗಿ ದೇಶದಲ್ಲಿ ತಲ್ಲಣ ಉಂಟಾಗಿದ್ದಂತಹ ಸಂದರ್ಭದಲ್ಲಿ ಆನ್ಲೈನ್ ಡಿಜಿಟಲ್ ಪ್ಲಾಟ್ಫಾರ್ಮ್ಗಳ ಮೂಲಕ ಭಾರತದಾದ್ಯಂತ 100ಕ್ಕೂ ಹೆಚ್ಚು ಗಾಯಕರನ್ನು ಪರಿಚಯಿಸಿದ ಹೆಗ್ಗಳಿಕೆ ಈ ಕಂಪೆನಿಗಿದೆ.
ಮೂವಿಟೋನ್ ಡಿಜಿಟಲ್ ಸಂಸ್ಥೆಯು ಉಪಗ್ರಹ, ಒಟಿಟಿ ಪ್ಲಾಟ್ಫಾರ್ಮ್, ಡಿಟಿಎಚ್, ಕೇಬಲ್ ಟಿವಿಗಳಿಗೆ ಚಲನಚಿತ್ರಗಳ ವಿತರಕ ಸಂಸ್ಥೆಯಾಗಿ ತೊಡಗಿಸಿಕೊಂಡಿದೆ. ಬಹುಭಾಷಾ ಚಲನಚಿತ್ರಗಳ ಏರ್ಫ್ಲೈಟ್ ಹಕ್ಕುಗಳಿಗಾಗಿ ಚಲನಚಿತ್ರ ವಿತರಕ ಸಂಸ್ಥೆ ಇದಾಗಿದೆ. ಸಂಸ್ಥೆಯು ತಾಂತ್ರಿಕ ವಿಭಾಗವನ್ನೂ ಹೊಂದಿದ್ದು, ಇಲ್ಲಿ ವೆಬ್ಸೈಟ್, ಅಪ್ಲಿಕೇಶನ್ ಮತ್ತು ಇ-ಕಾಮರ್ಸ್ ಪೋರ್ಟಲ್ಗಳನ್ನು ಅಭಿವೃದ್ದಿಪಡಿಸಲಾಗುತ್ತದೆ.
ತುಳು ವಿಷಯವನ್ನು ಭವಿಷ್ಯದಲ್ಲಿ ವಿವಿಧ ವೇದಿಕೆಗಳಲ್ಲಿ ಪ್ರದರ್ಶಿಸಲು ದಾಯ್ಜಿವರ್ಲ್ಡ್ ಮತ್ತು ಮೂವಿಟೋನ್ ಡಿಜಿಟಲ್ನ ಈ ಸಹಯೋಗವು ಒಂದು ಉತ್ತಮ ಆರಂಭವಾಗಿದೆ.