ಕಾರ್ಕಳ, ಅ 16 (DaijiworldNews/DB): ಅಪಘಾತದಿಂದಾಗಿ ಗಾಯಗೊಂಡ ಯುವಕನನ್ನು ಆಸ್ಪತ್ರೆಗೆ ಸಾಗಿಸಲು ತನ್ನ ಕಾರನ್ನು ನೀಡಿ ಸಚಿವ ವಿ. ಸುನಿಲ್ಕುಮಾರ್ ಅವರು ಬೈಕ್ ಏರಿ ತೆರಳಿ ಮಾನವೀಯತೆ ಮೆರೆದಿದ್ದಾರೆ.
ಸಚಿವ ಸುನಿಲ್ಕುಮಾರ್ ಅವರು ಶನಿವಾರ ಉಡುಪಿಯಲ್ಲಿ ಕಾರ್ಯಕ್ರಮ ಮುಗಿಸಿ ಕಾರ್ಕಳಕ್ಕೆ ತೆರಳುತ್ತಿದ್ದ ವೇಳೆ ಗುಂಡಡ್ಕ ಸರ್ಕಲ್ ಬಳಿ ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಯುವಕ ಗಂಭೀರ ಗಾಯಗೊಂಡು ಬಿದ್ದಿರುವುದು ಕಂಡು ಬಂದಿತ್ತು. ರಕ್ತಸ್ರಾವದೊಂದಿಗೆ ಯುವಕ ನರಳುತ್ತಿರುವುದನ್ನು ನೋಡಿದ ಕೂಡಲೇ ಸಚಿವರು ಚಾಲಕನಿಗೆ ಕಾರು ನಿಲ್ಲಿಸುವಂತೆ ಹೇಳಿ ಗಾಯಾಳುವಿನ ಬಳಿ ತೆರಳಿದ್ದಾರೆ. ಬಳಿಕ ತಮ್ಮ ಕಾರಿನಲ್ಲಿ ಆತನನ್ನು ಆಸ್ಪತ್ರೆಗೆ ಸಾಗಿಸುವಂತೆ ಸೂಚಿಸಿ ಬಳಿಕ ದ್ವಿಚಕ್ರ ವಾಹನವೊಂದರಲ್ಲಿ ಕಾರ್ಕಳದತ್ತ ತೆರಳಿದರು.
ಸಚಿವರ ಗನ್ಮ್ಯಾನ್ ಪ್ರಭಾಕರ, ಸ್ಥಳೀಯ ಯುವಕ ವಿನಯ್ ಮತ್ತು ಕಾರು ಚಾಲಕ ಮಂಜುನಾಥ ಗಾಯಾಳು ಯುವಕನನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಿದರು.