ಮಂಗಳೂರು, ಅ 16 (DaijiworldNews/DB): ಗುಜರಾತ್ನಲ್ಲಿ ಭಾರತ- ಪಾಕಿಸ್ಥಾನದ ಗಡಿಭಾಗದ ಕಾವಲು ಕಾಯುವ ಸಲುವಾಗಿ ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿದ್ದ ಎರಡು ಹೋವರ್ಕ್ರಾಫ್ಟ್ ನೌಕೆಗಳನ್ನು ಕಳುಹಿಸಿಕೊಡಲಾಗಿದೆ ಎಂದು ಕೋಸ್ಟ್ಗಾರ್ಡ್ ಪಶ್ಚಿಮ ವಲಯ ಕಮಾಂಡರ್ ಮನೋಜ್ ವಿ. ಬಾಡ್ಕರ್ ಹೇಳಿದ್ದಾರೆ.
ಪಶ್ಚಿಮ ವಲಯ ಕಮಾಂಡರ್ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಮಂಗಳೂರಿಗೆ ಭೇಟಿ ನೀಡಿದ್ದ ಅವರು ಶನಿವಾರ ಪಣಂಬೂರಿನ ಕೋಸ್ಟ್ ಗಾರ್ಡ್ ನೌಕೆ ಐಸಿಜಿಎಸ್ ವರಾಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಗುಜರಾತ್ಗೆ ಕಳುಹಿಸಲಾದ ಎರಡೂ ನೌಕೆಗಳು ತಣ್ಣೀರುಬಾವಿಯಲ್ಲಿ ಕಾರ್ಯಾಚರಿಸುತ್ತಿದ್ದವು. ಗುಜರಾತ್ನಲ್ಲಿ ಈ ನೌಕೆಗಳು ಅವಶ್ಯವಾಗಿರುವ ಹಿನ್ನೆಲೆಯಲ್ಲಿ ಕಳುಹಿಸಲಾಗಿದೆ. ಸದ್ಯ 18 ಹೋವರ್ಕ್ರಾಫ್ಟ್ಗಳು ನಮ್ಮ ಬಳಿಯಿವೆ. ಇದರ ಸಂಖ್ಯೆ ಹೆಚ್ಚಾದ ಬಳಿಕ ಮಂಗಳೂರಿಗೆ ಮತ್ತೆ ಕಳುಹಿಸಿಕೊಡುವ ಸಾಧ್ಯತೆ ಇದೆ ಎಂದರು.
ಕೋಸ್ಟ್ಗಾರ್ಡ್ ವಿಮಾನಗಳು ಮಂಗಳೂರು ಹಳೆ ವಿಮಾನ ನಿಲ್ದಾಣದಲ್ಲಿ ನಿಲ್ಲುತ್ತಿದ್ದು, ಅಲ್ಲಿ ವಿಮಾನ ನಿಲುಗಡೆಗೆ ಬೇಕಿರುವ ಹ್ಯಾಂಗರ್ಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಅದು ಪೂರ್ಣಗೊಂಡ ಬಳಿಕ ನಾಲ್ಕು ಡಾರ್ನಿ ಯರ್ ವಿಮಾನಗಳ ನಿಲುಗಡೆಗೂ ಅಲ್ಲಿ ಅವಕಾಶ ಲಭ್ಯವಾಗಲಿದೆ. ಆ ಮೂಲಕ ಮಂಗಳೂರು ಕೋಸ್ಟ್ಗಾರ್ಡ್ನ ಮುಖ್ಯ ವಾಯುನೆಲೆಯಾಗಿ ಪ್ರಸಿದ್ದಿಯಾಗಲಿದೆ ಎಂದು ಅವರು ತಿಳಿಸಿದರು.
ಸಿಂಗಲ್ ಎಂಜಿನ್ನ ಚೇತಕ್ ಹೆಲಿಕಾಪ್ಟರ್ ಬದಲಾಗಿ ಎಚ್ಎಎಲ್ ನಿರ್ಮಿತ ಅತ್ಯಾಧುನಿಕ ಎಲ್ಸಿಎಚ್ ಮಾರ್ಕ್-3 ಹೆಲಿಕಾಪ್ಟರ್ನ್ನು ಪ್ರಸ್ತುತ ಕೋಸ್ಟ್ಗಾರ್ಡ್ಗೆ ನೀಡಲಾಗುತ್ತಿದ್ದು, ಇದರಿಂದ ಸಮುದ್ರದಲ್ಲಿ 350 ಕಿ.ಮೀ.ವರೆಗೂ ಸಾಗಿ ಜೀವರಕ್ಷಣೆಯಂತಹ ಕಾರ್ಯಾಚರಣೆ ನಡೆಸಲು ಸಾಧ್ಯವಾಗುತ್ತಿದೆ. ಇನ್ನೂ ಹಳೆಯದಾಗಿರುವ ನೌಕೆಗಳನ್ನು ಬದಲಾಯಿಸಿ ಹೊಸ ನೌಕೆಗಳನ್ನು ತರಿಸುವ ಕೆಲಸ ನಡೆಯುತ್ತಿದೆ. ಕೋಸ್ಟ್ಗಾರ್ಡ್ ವಿಮಾನಗಳಲ್ಲಿ ಮಹಿಳಾ ಪೈಲಟ್ಗಳ ನೇಮಕಾತಿಗೂ ಯೋಜಿಸಲಾಗಿದೆ ಎಂದರು.
ಮಂಗಳೂರು ಕೋಸ್ಟ್ಗಾರ್ಡ್ ಕಮಾಂಡರ್ ಅರುಣ್ ಕುಮಾರ್ ಮಿಶ್ರ ಉಪಸ್ಥಿತರಿದ್ದರು.