ಮಂಗಳೂರು, ಅ 16 (Daijiworldnews/HR): ಸುರತ್ಕಲ್ ಟೋಲ್ ಗೇಟ್ ಹೋರಾಟಗಾರರ ಮನೆಗಳಿಗೆ ಪೊಲೀಸರು ಭೇಟಿ ನೀಡಿ ಕಾರ್ಯಚರಣೆ ನಡೆಸಿರುವ ಘಟನೆ ಶನಿವಾರ ತಡರಾತ್ರಿ ನಡೆದಿದೆ.
ಟೋಲ್ ಹೋರಾಟಗಾರರ ಮನೆಗೆ ರಾತ್ರೋರಾತ್ರಿ ಮಂಗಳೂರು ಪೊಲೀಸರು ನುಗ್ಗಿದ್ದು ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಎಂದು ಟೋಲ್ ಹೋರಾಟಗಾರರು ಆರೋಪಿಸಿದ್ದಾರೆ.
ಇನ್ನು ಅಕ್ಟೋಬರ್ 18 ರಂದು ಸುರತ್ಕಲ್ ಟೋಲ್ ತೆರವುಗೊಳಿಸುವ ಹೋರಾಟಕ್ಕೆ ಹೋರಾಟ ಸಮಿತಿ ಕರೆಕೊಟ್ಟಿದ್ದು, ಇದಕ್ಕೆ ಅನೇಕ ಸಂಘಟನೆಗಳು ಬೆಂಬಲ ನೀಡಿದ್ದವು.
ಅ. 18 ರಂದು ಟೋಲ್ ಗೆ ಮುತ್ತಿಗೆ ಹಾಕಲು ಹೋರಾಟ ಸಮಿತಿ ನಿರ್ಧರಿಸಿದ್ದು, ಈ ಹಿನ್ನೆಲೆಯಲ್ಲಿ ಹೋರಾಟವನ್ನು ನಿಲ್ಲಿಸಲು ಮುಂದಾದ ಸರ್ಕಾರ ಮಧ್ಯರಾತ್ರಿ ಪೊಲೀಸರಿಂದ ಮನೆಗೆ ದಾಳಿ ಮಾಡಿಸಿದೆ ಎಂದು ಟೋಲ್ ಹೋರಾಟಗಾರರು ಆರೋಪಿಸಿದ್ದಾರೆ.
ಮಧ್ಯರಾತ್ರಿ ಪೊಲೀಸರನ್ನು ಹೋರಾಟಗಾರರ ಮನೆಗಳಿಗೆ ಕಳುಹಿಸುತ್ತೀರಾ ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ವೇದವ್ಯಾಸ ಕಾಮತರೆ ? ಮಹಿಳಾ ಹೋರಾಟಗಾರರ ಮನೆಗೂ ಕಾಳರಾತ್ರಿ "ಗಂಡಸು" ಪೊಲೀಸರ ದಂಡು !! ಅದಕ್ಕೆಲ್ಲ ಜನ ಹೆದರುವ ಕಾಲ ಮುಗಿದಿದೆ. ತುಳುನಾಡಿನ ಮುಂದೆ ಬೆತ್ತಲಾಗುತ್ತಿದ್ದೀರಿ ಬಿಜೆಪಿಗರೆ ಎಚ್ಚರ ಎಂದು ಮುನೀರ್ ಕಾಟಿಪಳ್ಳ ವಾಗ್ದಾಳಿ ನಡೆಸಿದ್ದಾರೆ.