ಬಂಟ್ವಾಳ, ಅ 15 (DaijiworldNews/MS): ಬ್ರಿಡ್ಜ್ ಕಂ ಬ್ಯಾರೇಜ್ ನ ಪರಿಕಲ್ಪನೆಯಲ್ಲಿ ನೇತ್ರಾವತಿ ನದಿಗೆ ಬಂಟ್ವಾಳ ದಿಂದ ನರಿಕೊಂಬುಗೆ ನಿರ್ಮಾಣಗೊಳ್ಳಲಿರುವ ಸೇತುವೆಗೆ ಜಕ್ರಿಬೆಟ್ಟಿನಲ್ಲಿ ಪ್ರಾಥಮಿಕ ಹಂತದ ಕಾಮಗಾರಿಯನ್ನು ಸಣ್ಣನೀರಾವರಿ ಇಲಾಖೆ ಪ್ರಾರಂಭಿಸಿದೆ.
ಸುಮಾರು ೧೩೫ ಕೋ.ರೂ.ಗಳಲ್ಲಿ ಇಲಾಖೆಯು ಈ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಪ್ರಸ್ತಾವನೆಯಂತೆ ಜಕ್ರಿಬೆಟ್ಟು ಕಿಂಡಿ ಅಣೆಕಟ್ಟು ಹಾಗೂ ಸೇತುವೆ ಕಾಮಗಾರಿಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿ ಅನುದಾನ ಮಂಜೂರುಗೊಳಿಸಿದೆ. ಈ ಹಿಂದೆ ರಾಜ್ಯ ಸಣ್ಣ ನೀರಾವರಿ ಇಲಾಖೆ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಸೇತುವೆ ನಿರ್ಮಾಣದ ಸ್ಥಳ ಪರಿಶೀಲನೆ ನಡೆಸಿ ಅನುದಾನದ ಭರವಸೆ ನೀಡಿದ್ದರು.
ಪ್ರಾಥಮಿಕ ಹಂತದ ಕಾಮಗಾರಿ ಆರಂಭ
ಜಕ್ರಿಬೆಟ್ಟು ಕಿಂಡಿ ಅಣೆಕಟ್ಟು ಹಾಗೂ ಸೇತುವೆ ನಿರ್ಮಾಣಕ್ಕಾಗಿ ಬಂಟ್ವಾಳ ನಗರದ ಸಮಗ್ರ ಕುಡಿಯುವ ನೀರಿನ ಯೋಜನೆಯ ಜಾಕ್ವೆಲ್ ಸಮೀಪದಲ್ಲಿ ಈಗಾಗಲೇ ಪ್ರಾಥಮಿಕ ಹಂತದ ಕಾಮಗಾರಿ ಪ್ರಾರಂಭಗೊಂಡಿದ್ದು, ಮಣ್ಣು ತುಂಬಿಸಿ ಪೂರ್ಣ ಪ್ರಮಾಣದ ಕಾಮಗಾರಿಗಾಗಿ ವಿಸ್ತಾರವಾದ ಸ್ಥಳವನ್ನು ಅಂತಿಮಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ. ಜತೆಗೆ ಪಿಲ್ಲರ್ಗಳ ನಿರ್ಮಾಣಕ್ಕಾಗಿ ಮಣ್ಣು ಹಾಕುವ ಕಾರ್ಯವೂ ನಡೆಯುತ್ತಿದೆ.
ಸೇತುವೆಯು ಬಂಟ್ವಾಳ ನಗರ ಹಾಗೂ ನರಿಕೊಂಬು ಪ್ರದೇಶವನ್ನು ಸಂಪರ್ಕಿಸಲಿದ್ದು, ಒಂದು ಬದಿ ಪುಂಜಾಲಕಟ್ಟೆ-ಬಿ.ಸಿ.ರೋಡು ಹೆದ್ದಾರಿಯನ್ನು ಸಂಪರ್ಕಿಸಿದರೆ ಮತ್ತೊಂದು ಬದಿಯಲ್ಲಿ ನರಿಕೊಂಬು ಪುಳಿಕುಕ್ಕು ಪ್ರದೇಶದಲ್ಲಿ ಸಂಪರ್ಕ ಸಾಧಿಸಲಿದೆ. ಸೇತುವೆ ಸಂಪರ್ಕಿಸುವ ಎರಡೂ ಭಾಗದ ಪಕ್ಕದಲ್ಲೂ ರಸ್ತೆ ಇರುವುದರಿಂದ ದೊಡ್ಡ ಮಟ್ಟದ ಸಂಪರ್ಕ ರಸ್ತೆಯ ಅಗತ್ಯ ಇಲ್ಲ ಎಂದು ಇಲಾಖೆ ಮೂಲಗಳು ತಿಳಿಸಿವೆ.ಇಲಾಖೆಯ ಮಾಹಿತಿ ಪ್ರಕಾರ, ಒಟ್ಟು ೭.೫೦ ಮೀ. ಅಗಲದಲ್ಲಿ ವಾಹನ ಸಾಗುವುದಕ್ಕೆ ಅನುಕೂಲವಾಗುವ ಸೇತುವೆ ಇದಾಗಿದ್ದು, ಈ ಭಾಗದಲ್ಲಿ ನದಿಯ ಅಗಲ ೩೪೧ ಮೀ. ಆಗಿರುತ್ತದೆ. ಬಹುತೇಕ ಎರಡು ಬಸ್ಸುಗಳು ಮುಖಾಮುಖಿಯಾಗಿ ಸಾಗುವ ರೀತಿಯಲ್ಲಿ ಸೇತುವೆಯನ್ನು ಅಗಲಗೊಳಿಸಲಾಗಿದೆ.
ನೇತ್ರಾವತಿ ಹರಿವಿಗೆ ಅಲ್ಲಲ್ಲಿ ತಡೆ..!
ಕುಡಿಯುವ ನೀರು, ಕೈಗಾರಿಕೆಗಳಿಗೆ ನೀರು, ವಿದ್ಯುತ್ ಉತ್ಪಾದನೆ, ಕೃಷಿಗೆ ನೀರು ಹೀಗೆ ಎಲ್ಲಾ ಉದ್ದೇಶಗಳಿಗೆ ಉಪ್ಪಿನಂಗಡಿ- ಮಂಗಳೂರು ಮಧ್ಯೆ ನೇತ್ರಾವತಿ ನದಿಯಲ್ಲಿ ಜಕ್ರಿಬೆಟ್ಟುನಲ್ಲಿ ನಿರ್ಮಾಣವಾಗುತ್ತಿರುವ ಡ್ಯಾಮ್ ಸೇರಿದರೆ ಒಟ್ಟು ಸಂಖ್ಯೆ ೬ಕ್ಕೇರುತ್ತದೆ. ಉಪ್ಪಿನಂಗಡಿಯಿಂದ ಮಂಗಳೂರು ಭಾಗಕ್ಕೆ ಲೆಕ್ಕಾಚಾರ ಹಾಕಿದರೆ ಬಿಳಿಯೂರಿನಲ್ಲಿ ಕಿಂಡಿ ಅಣೆಕಟ್ಟು, ಅದರ ಕೆಳಭಾಗದ ಶಂಭೂರಿನಲ್ಲಿ ವಿದ್ಯುತ್ ಉತ್ಪಾದನೆಯ ಎಎಂಆರ್ ಡ್ಯಾಮ್, ಇದರ ನಡುವೆ ಸರಪಾಡಿಯಲ್ಲಿ ಎಂಆರ್ಪಿಎಲ್ಗೆ ನೀರು ಪೂರೈಕೆ ಮಾಡುವ ಸಣ್ಣ ಡ್ಯಾಮ್ ಇದ್ದು, ಪ್ರಸ್ತುತ ಅದು ಶಂಭೂರು ಡ್ಯಾಮ್ನಿಂದಾಗಿ ಮುಳುಗಡೆಯಾಗಿದೆ.
ಶಂಭೂರಿನ ಕೆಳಭಾಗಕ್ಕೆ ಬಂಟ್ವಾಳ ಸಮೀಪದ ಜಕ್ರಿಬೆಟ್ಟಿನಲ್ಲಿ ಕಿಂಡಿ ಅಣೆಕಟ್ಟಿನ ಕಾಮಗಾರಿ ಪ್ರಾರಂಭಗೊಂಡಿದ್ದು, ಅದರ ಕೆಳಭಾಗಕ್ಕೆ ಮಂಗಳೂರು ನಗರಕ್ಕೆ ನೀರು ಪೂರೈಕೆ ಮಾಡುವ ತುಂಬೆ ಡ್ಯಾಮ್ ಇರುತ್ತದೆ. ಅದರಿಂದ ಮತ್ತೂ ಕೆಳಗಡೆ ಅಡ್ಯಾರ್-ಹರೇಕಳ ಮಧ್ಯೆ ಕಿಂಡಿ ಅಣೆಕಟ್ಟು ನಿರ್ಮಾಣವಾಗಿದೆ. ಈ ನಡುವೆ ತುಂಬೆಯಲ್ಲಿ ಮತ್ತೊಂದು ಹಳೆಯ ಡ್ಯಾಮ್ ಇದ್ದು, ಸದ್ಯಕ್ಕೆ ಅದು ಹೊಸ ಡ್ಯಾಮ್ನ ಹಿನ್ನೀರಿನಲ್ಲಿ ಮುಳುಗಡೆಯಾಗಿದೆ.
ಸೈಟ್ ಕ್ಲಿಯರೆನ್ಸ್ ಕಾಮಗಾರಿ
ಜಕ್ರಿಬೆಟ್ಟುನಲ್ಲಿ ಕಿಂಡಿ ಅಣೆಕಟ್ಟು, ಸೇತುವೆ ನಿರ್ಮಾಣಕ್ಕಾಗಿ ಪ್ರಸ್ತುತ ಪ್ರಾಥಮಿಕ ಹಂತದ ಸೈಟ್ ಕ್ಲಿಯರೆನ್ಸ್ ಕಾಮಗಾರಿ ಆರಂಭಗೊಂಡಿದ್ದು, ಮುಂದೆ ಪೂರ್ಣ ಪ್ರಮಾಣದ ಕಾಮಗಾರಿ ಆರಂಭಗೊಳ್ಳುತ್ತದೆ. ಈ ಭಾಗದಲ್ಲಿ ನದಿಯ ಅಗಲ ೩೪೧ ಮೀ. ಇದ್ದು, ೭.೫೦ ಮೀ. ಅಗಲದಲ್ಲಿ ಸೇತುವೆ ನಿರ್ಮಾಣಗೊಳ್ಳಲಿದೆ.- ಶಿವಪ್ರಸನ್ನ ಸಹಾಯಕ ಎಂಜಿನಿಯರ್ ಸಣ್ಣ ನೀರಾವರಿ ಇಲಾಖೆ, ಬಂಟ್ವಾಳ