ಮಂಗಳೂರು,ಅ 15 (DaijiworldNews/MS): ಜಾಗತಿಕ ನಾವೀನ್ಯತೆ ಸೂಚ್ಯಂಕದಲ್ಲಿ ಭಾರತ 14ನೇ ಸ್ಥಾನದಲ್ಲಿದೆ. ಮಾನವ ಜನಾಂಗದ ಭವಿಷ್ಯದ ಅಭಿವೃದ್ಧಿಯಲ್ಲಿ ದೇಶವು ಪ್ರಮುಖ ಪಾತ್ರ ವಹಿಸಲು ಸಜ್ಜಾಗಿದೆ ಎಂದು ಕೇಂದ್ರದ ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲ ಸಚಿವರಾದ ಧರ್ಮೇಂದ್ರ ಪ್ರಧಾನ್ ಅವರು ಹೇಳಿದರು.
ಅವರು ಅ.15ರ ಶನಿವಾರ ಸುರತ್ಕಲ್ನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (ಎನ್.ಐ.ಟಿ.ಕೆ.)ಯ 20ನೇ ವಾರ್ಷಿಕ ಘಟಿಕೋತ್ಸವದಲ್ಲಿ ಭಾಷಣ ಮಾಡಿದರು.
ಭಾರತದ ಭವಿಷ್ಯವನ್ನೇ ಬದಲಿಸುವ ನಿಟ್ಟಿನಲ್ಲಿ ಮಾಜಿ ರಾಷ್ಟ್ರಪತಿ ಎ.ಪಿ.ಜೆ ಅಬ್ದುಲ್ ಕಲಾಂ ಅವರಿಂದ ಸ್ಫೂರ್ತಿ ಪಡೆಯುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದ ಅವರು, ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ, ಡೇಟಾ ಅನಾಲಿಟಿಕ್ಸ್, ಜಿನೋಮ್ ಎಡಿಟಿಂಗ್ ಮತ್ತು 3ಡಿ ಪ್ರಿಂಟಿಂಗ್ ನಮ್ಮ ಆದ್ಯತೆಯ ಕ್ಷೇತ್ರಗಳಾಗಿವೆ ಎಂದರು.
ಭವಿಷ್ಯದಲ್ಲಿ ಮಾನವ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಲು ಮತ್ತು ವಿಶ್ವ ಗುರುವಾಗಿ ತನ್ನ ವೈಭವವನ್ನು ಮರಳಿ ಪಡೆಯುವ ನಿರೀಕ್ಷೆಯಲ್ಲಿ ಜಗತ್ತು ಭಾರತದತ್ತ ನೋಡುತ್ತಿದೆ, ಭವಿಷ್ಯದ ಮಹತ್ವಾಕಾಂಕ್ಷೆಗಳನ್ನು ಸಾಧಿಸಲು ದೇಶಕ್ಕೆ ಹೆಚ್ಚಿನ ಉದ್ಯಮಿಗಳು ಮತ್ತು ನವೋದ್ಯಮಿಗಳ ಅಗತ್ಯವಿದೆ. ಕೃಷ್ಣದೇವರಾಯ ಮತ್ತು ಸರ್ ಎಂ.ವಿಶ್ವೇಶ್ವರಯ್ಯನವರ ನಾಡಿನಲ್ಲಿ ಎನ್.ಐ.ಟಿ.ಕೆ ವಿದ್ಯಾರ್ಥಿಗಳೂ ಸೇರಿದಂತೆ ದೇಶದ ಬಲಿಷ್ಠ ಭವಿಷ್ಯ ವಿದ್ಯಾರ್ಥಿಗಳ ಕೈಯಲ್ಲಿದೆ. ರಾಜ್ಯದಲ್ಲಿ ಎಂಜಿನಿಯರಿಂಗ್, ವಾಸ್ತುಶಿಲ್ಪ ಮತ್ತು ಸಾಂಸ್ಕøತಿಕ ಪರಂಪರೆಯಿದೆ. ಎನ್.ಐ.ಟಿ.ಕೆ ವಿದ್ಯಾರ್ಥಿಗಳು ಜಾಗತಿಕ ಮಟ್ಟದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಈಗ ಅವರು ಉದ್ಯೋಗ ಸೃಷ್ಟಿಕರ್ತರಾಗಿ ರೂಪಾಂತರಗೊಳ್ಳುವ ಗುರಿ ಹೊಂದಬೇಕೆಂದರು.
ಸುಸ್ಥಿರತೆಯೆಡೆಗೆ ಎನ್.ಐ.ಟಿ.ಕೆಯ ಒಲವನ್ನು ಶ್ಲಾಘಿಸಿದ ಪ್ರಧಾನ್ ಅವರು, ಜೈವಿಕ ತ್ಯಾಜ್ಯ ಮರುಬಳಕೆ ಘಟಕ ಮತ್ತು ಕ್ಯಾಂಪಸ್ನಲ್ಲಿ ಇ-ಬೈಕ್ಗಳಿಗಾಗಿ ಸೌರಶಕ್ತಿ ಚಾಲಿತ ಚಾಜಿರ್ಂಗ್ ಸ್ಟೇಷನ್ ಹೊಂದಿರುವುದನ್ನು ಶ್ಲಾಘಿಸಿದರು. ಸಂಸ್ಥೆಯು ಪೂರ್ಣ ಪ್ರಮಾಣದ ಸುಸ್ಥಿರ ಇಂಧನ ವಿಭಾಗವನ್ನು ಹೊಂದುವಂತೆ ಸಲಹೆ ನೀಡಿದರು.
ಎನ್.ಐ.ಟಿ.ಕೆಯಲ್ಲಿ ಎಂಜಿನಿಯರಿಂಗ್ ಮೀರಿ, ಸಂಶೋಧನೆ ಮತ್ತು ಆವಿμÁ್ಕರಕ್ಕೆ ಪೂರಕ ವಾತಾವರಣವನ್ನು ಬಲಪಡಿಸುವಂತೆ ತಿಳಿಸಿದ ಸಚಿವರು, ಕನ್ನಡದಲ್ಲಿ ಇಂಜಿನಿಯರಿಂಗ್ ಪಠ್ಯಪುಸ್ತಕಗಳನ್ನು ಅಭಿವೃದ್ಧಿ ಪಡಿಸುವುದನ್ನು ಸವಾಲಾಗಿ ತೆಗೆದುಕೊಳ್ಳಲು ಸಂಸ್ಥೆಯನ್ನು ಕೇಳಿಕೊಂಡರು.
ಇದಕ್ಕೂ ಮುನ್ನ ಸಚಿವರು ಒಂಬತ್ತು ಬಿ.ಟೆಕ್ ಹಾಗೂ 30 ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ ಪ್ರಶಸ್ತಿ ಪ್ರದಾನ ಮಾಡಿದರು.