ಬಂಟ್ವಾಳ, ಅ 15 (DaijiworldNews/MS): ಅಭಿವೃದ್ಧಿ ಕಾರ್ಯಗಳಿಗೆ ಮರಗಳನ್ನು ತೆರವು ಮಾಡಿದರೆ ಅದರ ಹತ್ತು ಪಟ್ಟು ಗಿಡಗಳನ್ನು ನೆಡಬೇಕು ಎಂದು ಅರಣ್ಯ ಇಲಾಖೆಯ ನಿರ್ದೇಶನವಿದ್ದು, ಅದರಂತೆ ಬಿ.ಸಿ.ರೋಡು-ಪುಂಜಾಲಕಟ್ಟೆ ಹೆದ್ದಾರಿ ಅಭಿವೃದ್ಧಿಗಾಗಿ ತೆರವುಗೊಂಡ ಮರಗಳಿಗೆ ಪರ್ಯಾಯವಾಗಿ ಬಂಟ್ವಾಳ ಅರಣ್ಯ ಇಲಾಖೆಯು ಸೇವಾ ಸಂಸ್ಥೆಗಳ ಸಹಯೋಗ ಪಡೆದು ಈ ಬಾರಿ ೨೫೦೦ ಗಿಡಗಳನ್ನು ನೆಡುವುದಕ್ಕೆ ಯೋಜನೆ ಹಾಕಿಕೊಂಡಿದ್ದು, ಅನುಷ್ಠಾಗೊಳಿಸುತ್ತಿದೆ.
ಈಗಾಗಲೇ ಹೆದ್ದಾರಿ ಅಭಿವೃದ್ಧಿ ಕಾರ್ಯ ಪೂರ್ಣಗೊಂಡಿದ್ದು, ನಿಯಮದ ಪ್ರಕಾರ ಗಿಡಗಳ ನಾಟಿ ಕಾರ್ಯವನ್ನು ಅರಣ್ಯ ಇಲಾಖೆಯೇ ಮಾಡಬೇಕಿತ್ತು. ಆದರೆ ಇಲಾಖೆಯಿಂದ ಅನುದಾನ ಬಾರದೇ ಇರುವುದರಿಂದ ಅದಕ್ಕಾಗಿ ಸೇವಾ ಸಂಸ್ಥೆಗಳ ಸಹಕಾರ ಪಡೆದು ನಾಟಿ ಕಾರ್ಯ ನಡೆಸುತ್ತಿದ್ದು ಭಾಗಶಃ ಪೂರ್ಣಗೊಂಡಿದೆ.ಈಗಾಗಲೇ ಜಕ್ರಿಬೆಟ್ಟು ಭಾಗದಿಂದ ಗಿಡಗಳನ್ನು ನೆಡುವ ಕಾರ್ಯ ನಡೆದಿದ್ದು, ಹೆದ್ದಾರಿ ಹಾಗೂ ನೇತ್ರಾವತಿ ನದಿಯ ಮಧ್ಯ ಭಾಗದಲ್ಲಿ ಸಾಕಷ್ಟು ಗಿಡಗಳನ್ನು ನೆಡಲಾಗಿದೆ. ಮುಂದೆ ಈ ಗಿಡಗಳು ಬೆಳೆದರೆ ಹೆದ್ದಾರಿ ಬದಿಯ ಈ ನೇತ್ರಾವತಿ ಕಿನಾರೆ ಸುಂದರವಾಗಿ ಕಂಡುಬರಲಿದೆ. ಜತೆಗೆ ಮಣಿಹಳ್ಳ ಭಾಗದಲ್ಲೂ ಖಾಲಿ ಜಾಗದಲ್ಲಿ ಸಾಕಷ್ಟು ಗಿಡಗಳನ್ನು ನೆಡಲಾಗಿದೆ.
ಕಳೆದ ವರ್ಷವೇ ಗಿಡಗಳ ನಾಟಿ
ಹೆದ್ದಾರಿ ಬದಿ ಗಿಡಗಳನ್ನು ನೆಡುವುದಕ್ಕೆ ಕಳೆದ ವರ್ಷವೇ ಚಾಲನೆ ನೀಡಲಾಗಿದ್ದು, ಲಯನ್ಸ್ ಸೇವಾ ಸಂಸ್ಥೆಯ ಸಹಯೋಗದೊಂದಿಗೆ ಕಳೆದ ವರ್ಷ ಬಿ.ಸಿ.ರೋಡಿನಿಂದ ಜಕ್ರಿಬೆಟ್ಟುವರೆಗೆ ಸುಮಾರು ೧ ಸಾವಿರ ಗಿಡಗಳನ್ನು ನಾಟಿ ಮಾಡಲಾಗಿದೆ. ಆದರೆ ಹೆದ್ದಾರಿ ಬದಿ ಹೆಚ್ಚಿನ ಕಡೆ ಜಾಗದ ಕೊರತೆ, ಕೆಲವೆಡೆ ಇಂಟರ್ಲಾಕ್ ಅಳವಡಿಸಿರುವುದರಿಂದ ಹೆಚ್ಚಿನ ಗಿಡಗಳ ನಾಟಿ ಸಾಧ್ಯವಾಗಿರಲಿಲ್ಲ.ಈ ಬಾರಿ ಜಕ್ರಿಬೆಟ್ಟುನಿಂದ ಪುಂಜಾಲಕಟ್ಟೆ ಭಾಗಕ್ಕೆ ಎಲ್ಲಿಯವರೆಗೆ ಸಾಧ್ಯವೋ ಅಲ್ಲಿಯವರೆಗೆ ಸುಮಾರು ೨೫೦೦ ಗಿಡಗಳನ್ನು ನೆಡುವ ಯೋಜನೆ ಹಾಕಿಕೊಂಡಿದ್ದಾರೆ. ಪರಿಸರ ಪ್ರೇಮಿ ಮಾಧವ ಉಳ್ಳಾಲ್ ಅವರ ನೇತೃತ್ವದಲ್ಲಿ ಲಯನ್ಸ್ ಸೇವಾ ಸಂಸ್ಥೆಯವರು ಒಂದಷ್ಟು ಗಿಡಗಳ ನಾಟಿಗೆ ಸಹಕಾರ ನೀಡಿದ್ದಾರೆ.
11,060 ಗಿಡಗಳ ನಾಟಿ
ಬಿ.ಸಿ.ರೋಡು-ಪುಂಜಾಲಕಟ್ಟೆ ಹೆದ್ದಾರಿ ಅಭಿವೃದ್ಧಿಗಾಗಿ ಇಲಾಖೆ ನೀಡಿದ ಮಾಹಿತಿ ಪ್ರಕಾರ 1,106 ಮರಗಳನ್ನು ತೆರವು ಮಾಡಲಾಗಿದೆ. ಅದಕ್ಕೆ ಪರ್ಯಾಯವಾಗಿ 10 ಪಟ್ಟು ಗಿಡಗಳನ್ನು ನೆಡಬೇಕು ಎಂದಾದರೆ ಬರೋಬ್ಬರಿ 11,060 ಗಿಡಗಳನ್ನು ನೆಡಬೇಕಾಗುತ್ತದೆ. ಗಿಡಗಳನ್ನು ನೆಡುವುದಕ್ಕಾಗಿಯೇ ಒಂದು ಗಿಡಕ್ಕೆ ತಲಾ 300 ರೂ.ಗಳಂತೆ ಕಾಮಗಾರಿ ನಡೆಸುವ ಗುತ್ತಿಗೆ ಸಂಸ್ಥೆಯು 33,18,000 ರೂ.ಗಳನ್ನು ಇಲಾಖೆಗೆ ಪಾವತಿಸಿದೆ. ಉಳಿದಂತೆ ಕಿ.ಮೀ.ಗೆ ಪಾವತಿಸುವ ಮೊತ್ತ, ಮರಗಳ ಮೌಲ್ಯ, ಅರಣ್ಯ ಅಭಿವೃದ್ಧಿ ಶುಲ್ಕ, ಜಿಎಸ್ಟಿ, ಆದಾಯ ತೆರಿಗೆ ಸೇರಿ ಒಟ್ಟು 1.25 ಕೋ.ರೂ.ಗಳನ್ನು ಇಲಾಖೆಗೆ ಪಾವತಿಸಲಾಗಿದೆ.
2,500ಕ್ಕೂ ಅಧಿಕ ಗಿಡಗಳ ನಾಟಿ
ಹೆದ್ದಾರಿ ಬದಿ ಗಿಡಗಳನ್ನು ನೆಡುವುದಕ್ಕೆ ಇಲಾಖೆಯ ಅನುದಾನ ಬಾರದೇ ಇರುವುದರಿಂದ ಲಯನ್ಸ್ನಂತಹ ಸೇವಾ ಸಂಸ್ಥೆಯ ಸಹಕಾರ ಪಡೆದು ಗಿಡಗಳ ನಾಟಿ ಕಾರ್ಯ ಮಾಡುತ್ತಿದ್ದೇವೆ. ಗಿಡಗಳು ಹಾಗೂ ಗುಂಡಿ ತೋಡಿ ಗಿಡ ನೆಡುವುದಕ್ಕೆ ಕಾರ್ಮಿಕರನ್ನು ಸಂಸ್ಥೆಯವರು ಒದಗಿಸುವ ಭರವಸೆ ನೀಡಿದ್ದಾರೆ. ಈ ಬಾರಿ2,500ಕ್ಕೂ ಅಧಿಕ ಗಿಡಗಳ ನಾಟಿಯ ಯೋಚನೆ ಇದೆ.
ರಾಜೇಶ್ ಬಳಿಗಾರ್, ವಲಯ ಅರಣ್ಯಾಧಿಕಾರಿ, ಬಂಟ್ವಾಳ