ಕಾರ್ಕಳ, ಅ 15 (DaijiworldNews/DB): ಕಾರ್ಕಳ ಹಾಗೂ ಹೆಬ್ರಿ ತಾಲೂಕಿನ ಕೆಲವು ಗ್ರಾಮಗಳಲ್ಲಿ ಅಡಿಕೆ ಬೆಳೆಗೆ ಅಂಬ್ರೋಸಿಯಾ ಕೀಟಭಾದೆ ಕಾಣಿಸಿಕೊಂಡಿದೆ.
2018ರಲ್ಲಿ ಪುತ್ತೂರು, ಸುಳ್ಯ ಭಾಗಗಳಲ್ಲಿ ಕಂಡು ಬಂದಿದ್ದ ಈ ಭಾದೆಯು ಪ್ರಸ್ತುತ ಹೆಬ್ರಿ ತಾಲೂಕಿನ ಮಾಗದ್ದೆ ಹಾಗೂ ಕಾರ್ಕಳದ ಶಿರ್ಲಾಲು ಭಾಗದ ಕೆಲವು ರೈತರ ತೋಟಗಳಲ್ಲಿ ಕಾಣಿಸಿಕೊಂಡಿದ್ದು, ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಪ್ರಾದೇಶಿಕ ಕೃಷಿ ಹಾಗೂ ತೋಟಗಾರಿಕೆ ಸಂಶೋಧನಾ ಕೇಂದ್ರ ಬ್ರಹ್ಮಾವರದ ವಿಜ್ಞಾನಿಗಳೊಂದಿಗೆ ಪರಿಶೀಲನೆ ನಡೆಸಿದ್ದಾರೆ.
ಈ ದುಂಬಿಯು ಕುಟ್ಟೆ ಜಾತಿಯ ದುಂಬಿಯಾಗಿದ್ದು, ಯೂಪ್ಲಾಟಿಪಸ್ಪ್ಯಾರಾಲ್ಲೆಲಸ್ ಎಂಬುದಾಗಿ ಗುರುತಿಸಲ್ಪಟ್ಟಿದ್ದು ಸುಮಾರು 4 ಮಿ.ಮಿ ಉದ್ದವಿದ್ದು ಕಂದು ಬಣ್ಣದ ಶರೀರದೊಂದಿಗೆ ಹಳದಿ ಬಣ್ಣದ ರೋಮಗಳನ್ನು ಹೊಂದಿರುತ್ತದೆ.
ಈ ದುಂಬಿಗಳು ಸಸಿ ಮರಗಳಿಗೆ ಹೆಚ್ಚಾಗಿ ಭಾದೆ ಉಂಟು ಮಾಡುತ್ತಿದ್ದು ಫ್ರೌಢ ಹೆಣ್ಣು ದುಂಬಿಯು ಅಡಿಕೆ ಮರದ ಕಾಂಡಗಳ ಮೇಲೆ 1.50 ಮಿ.ಮೀ ಸುತ್ತಳತೆಯ 1.20 ? 4.60 ಸೆ.ಮೀ ಆಳದ ರಂದ್ರಗಳನ್ನು ಕೊರೆದು ಒಳಗೆ ಪ್ರವೇಶಿಸಿ ಸಂತಾನೋತ್ಪತ್ತಿ ಮುಂದುವರೆಸುತ್ತವೆ. ಪ್ರಥಮ ಹಂತದಲ್ಲಿ ಅಡಿಕೆ ಮರಗಳ ಕಾಂಡದ ಭಾಗದಲ್ಲಿ ಅಲ್ಲಲ್ಲಿ ಕಂದು ಬಣ್ಣದ ಅಂಟು ದ್ರವ ಸೋರಿಕೆ ಕಂಡು ಬರುತ್ತದೆ. ಬಳಿಕ ಮರದ ಬೆಳವಣಿಗೆ ಕುಂಠಿತವಾಗುತ್ತದೆ. ನಂತರದ ಹಂತಗಳಲ್ಲಿ ನೂರಾರು ರಂಧ್ರಗಳಿಂದ ಬಿಳಿ ಬಣ್ಣದ ಪುಡಿ ಉದುರುವಿಕೆ ಪ್ರಾರಂಭವಾಗುತ್ತದೆ. ಮುಂದಿನ ಹಂತದಲ್ಲಿ ಅಡಿಕೆ ಮರದ ಕೆಳ ಭಾಗದ ಎಲೆಗಳು ಹಳದಿಯಾಗಿ ಶಿರ ಕಳಚಿ ಬೀಳುವ ಸಂಭವವಿರುತ್ತದೆ. ಈ ದುಂಬಿಯ ಭಾದೆಯು ಸಾಮಾನ್ಯವಾಗಿ ಕಡಿಮೆ ಪ್ರಾಯದ ಗಿಡಗಳಲ್ಲಿ ಹೆಚ್ಚು ಕಂಡು ಬರುತ್ತಿದ್ದು, ಹೆಚ್ಚು ನೀರಾವರಿ ನೀಡುವ ತೋಟಗಳಲ್ಲಿ, ತಗ್ಗು ಪ್ರದೇಶದ ತೋಟಗಳಲ್ಲಿ ಹಾಗೂ ಅತೀ ಪೋಷಕಾಂಶ ನೀಡುತ್ತಿರುವ ರೈತರ ತೋಟಗಳಲ್ಲಿ (ಪ್ರಮುಖವಾಗಿ ಸಾರಜನಕಯುಕ್ತ ಸಾವಯವ ಹಾಗೂ ರಾಸಾಯನಿಕ ಗೊಬ್ಬರ) ಹೆಚ್ಚಾಗಿ ಕಂಡು ಬರುತ್ತದೆ.
ಈ ದುಂಬಿಯ ನಿಯಂತ್ರಣಕ್ಕೆ ಸಮತೋಲನ ಸಾವಯವ ಹಾಗೂ ರಾಸಾಯನಿಕ ರಸಗೊಬ್ಬರಗಳ ಬಳಕೆ, ಸಮರ್ಪಕ ಬಸಿಕಾಲುವೆ ಹಾಗೂ ಹದವಾದ ನೀರಾವರಿ ಅವಶ್ಯ. ಭಾದಿತ ತೋಟಗಳಲ್ಲಿ ಭಾದಿತ ಮರ ಹಾಗೂ ಸುತ್ತಲಿನ ಮರಗಳಿಗೆ ಕ್ಲೋರೊಪೈರಿಫಾಸ್ 20 ಇ.ಸಿ ಕೀಟನಾಶಕವನ್ನು 2 ಮಿ.ಲೀ ಪ್ರತಿ ಲೀಟರ್ ನೀರಿಗೆ ಬೆರೆಸಿ ಕಾಂಡದ ಬಾಗಕ್ಕೆ ಹಚ್ಚುವುದರಿಂದ ನಿಯಂತ್ರಣ ಸಾಧ್ಯವಿದೆ ಎಂದು ಕಾರ್ಕಳ ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.