ಮಂಗಳೂರು, ಫೆ 15(MSP): ರಜೆ ಮುಗಿಸಿ ದೇಶ ಸೇವೆಯ ಕಾರ್ಯಕ್ಕೆ ತೆರಳುತ್ತಿದ್ದ ಸಿಆರ್ ಪಿಎಫ್ ಯೋಧರ ಮೇಲೆ ಜಮ್ಮು-ಕಾಶ್ಮೀರಾದ ಅವಂತಿಪೋರಾದಲ್ಲಿ ಜೈಶ್- ಎ- ಮೊಹಮ್ಮದ್ ಉಗ್ರರು ಗುರುವಾರ ನಡೆಸಿದ ಪೈಶಾಚಿಕ ಕೃತ್ಯವನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ನಗರದ ಪಿವಿಎಸ್ ಸರ್ಕಲ್ ನಲ್ಲಿ ಫೆ.15ರ ಶುಕ್ರವಾರ ಪ್ರತಿಭಟನೆ ನಡೆಸಿತು.
ಇದೇ ವೇಳೆ ಘಟನೆಯನ್ನು ಖಂಡಿಸಿ ಮಾತನಾಡಿದ ಬಜರಂಗದಳ ಪ್ರಾಂತ ಸಂಚಾಲಕ ಶರಣ್ ಪಂಪ್ ವೆಲ್, ಉಗ್ರವಾದವನ್ನು ಬೆಂಬಲಿಸುವ ಪಾಕಿಸ್ತಾನವನ್ನು ವಿಶ್ವ ಭೂಪಟದಲ್ಲಿ ಇರದಂತೆ ನಾಶ ಮಾಡಬೇಕು. ಅವಂತಿಪೋರಾದಲ್ಲಿ 42 ಯೋಧರ ಬಲಿಪಡೆದ ಪೈಶಾಚಿಕ ಕೃತ್ಯಕ್ಕೆ ಪಾಕಿಸ್ತಾನವೇ ನೇರ ಹೊಣೆ. ನಿನ್ನೆ ನಡೆದ ವಿದ್ವಾಂಸಕ ಕೃತ್ಯದಲ್ಲೂ ಭಾರತದ ಪ್ರಜೆಯಾದ ಅದಿಲ್ ಅಹಮದ್ ಎನ್ನುವ ಯುವಕನನ್ನು ಬಳಸಿಕೊಳ್ಳಲಾಗಿದೆ. ಹೀಗಾಗಿ ದೇಶಕ್ಕೆ ಹೊರಗಿನ ಉಗ್ರರಿಗಿಂತ ದೇಶದೊಳಿಗಿನ ಉಗ್ರರಿಂದ ಅಪಾಯವಿದೆ. ಉಗ್ರರಿಗೆ ಸಹಾಯ ಮಾಡುವ ದೇಶದೊಳಗಿನ ಉಗ್ರರನ್ನು ನಾಶ ಮಾಡುವ ಕೆಲಸವಾಗಬೇಕು. ಈ ಪೈಶಾಚಿಕ ಕೃತ್ಯದಲ್ಲಿ ಭಾಗಿಯಾದ ಪ್ರತಿಯೊಬ್ಬರ ಶಿರವನ್ನು ತರಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ವಿಶ್ವ ಹಿಂದೂ ಪರಿಷದ್ ಜಿಲ್ಲಾಧ್ಯಕ್ಷ ಜಗದೀಶ್ ಶೇಣವ ಮಾತನಾಡಿ, ಉಗ್ರ ಸಂಘಟನೆಯನ್ನು ಸದೆಬಡಿಯಲು ಸರ್ಜಿಕಲ್ ಸ್ಟ್ರೈಕ್ ಮಾತ್ರ ಸಾಲುವುದಿಲ್ಲ, ಇದಕ್ಕಾಗಿ ಇನ್ನೊಂದು ಯುದ್ದ ನಡೆಯಬೇಕು. ಈ ವಿದ್ವಾಂಸಕ ಕೃತ್ಯದ ಪ್ರತೀಕಾರ ಸಾಧಿಸಲೇಬೇಕು ಎಂದು ಕಿಡಿಕಾರಿದರು. ಇದಕ್ಕೂ ಮೊದಲು , 42 ಯೋಧರ ಬಲಿ ಪಡೆದ ವಿದ್ವಾಂಸಕ ಕೃತ್ಯವನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಮಾತನಾಡುವ, ಪೋಸ್ಟರ್ ಗಳನ್ನು ಹಂಚುವ ದೇಶದ್ರೋಹಿಗಳನ್ನು ಪಾಕಿಸ್ತಾನಕ್ಕೆ ರವಾನೆ ಮಾಡಬೇಕು್, ಅವರ ವಿರುದ್ದ ಸುಮೋಟೋ ಕೇಸ್ ದಾಖಲಿಸಿಕೊಳ್ಳಬೇಕು ಎಂದು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದರು.
ಇದೇ ವೇಳೆ ಪಿವಿಎಸ್ ಸರ್ಕಲ್ ನಲ್ಲಿ ಎರಡು ನಿಮಿಷಗಳ ಕಾಲ ರಸ್ತೆ ತಡೆ ನಡೆಸಿ , ಘೋಷಣೆಯನ್ನು ಕೂಗಿದರು.