ಬಂಟ್ವಾಳ, ಅ 15 (DaijiworldNews/HR): ಅಧಿಕಾರಿಯೊಬ್ಬರ ಮನೆಗೆ ಕನ್ನ ಹಾಕಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವಾದ ಘಟನೆ ಕುಕ್ಕಲ ಗ್ರಾಮದ ಒಳಬೈಲು ಎಂಬಲ್ಲಿ ನಡೆದಿದ್ದು, ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿದೆ.
ಸರಪಾಡಿ ಗ್ರಾ.ಪಂ.ನಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಸಿಲ್ವಿಯಾ ಫೆರ್ನಾಂಡಿಸ್ ಅವರ ಮನೆಯಿಂದ ಸುಮಾರು 25 ಗ್ರಾಂನ 1.2 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ.
ಸಿಲ್ವಿಯಾ ಅವರು ಮಗಳ ಮನೆಗೆ ಹೋಗಿದ್ದು, ಈ ವೇಳೆ ಕಳ್ಳರು ರಾತ್ರಿ ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ಕಟರ್ ಬಳಸಿ ಕಬ್ಬಿಣದ ಕಿಟಕಿಯ ಮೂಲಕ ಮನೆಗೆ ನುಗ್ಗಿದ್ದಾರೆ.
ಇನ್ನು ಪುಂಜಾಲಕಟ್ಟೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಸುತೇಶ್ ಸಿಲ್ವಿಯಾ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬೆರಳಚ್ಚುಗಳನ್ನು ಸಂಗ್ರಹಿಸಿ ವಿಧಿವಿಜ್ಞಾನ ತಜ್ಞರಿಗೆ ಕಳುಹಿಸಲಾಗಿದೆ.