ಮಂಗಳೂರು,ಫೆ 15(MSP): ನಗರದ ರಾವ್ ಅಂಡ್ ರಾವ್ ವೃತ್ತದಲ್ಲಿ 2012ರಲ್ಲಿ ನಡೆದಿದ್ದ ಕಾಂಚನಾ ಟೆಕ್ಸ್ ಟೈಲ್ಸ್ ಮ್ಯಾನೇಜರ್ ದೀಪಕ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳೂರು ದಕ್ಷಿಣ ಉಪ ವಿಭಾಗದ ರೌಡಿ ನಿಗ್ರಹ ದಳ ಬಂಧಿಸಿದ್ದಾರೆ. ಉಳ್ಳಾಲಬೈಲ್ ಅನಿಲ ಕಾಂಪೌಂಡ್ ನಿವಾಸಿ ಮಹಮ್ಮದ್ ಅಶ್ರಫ್ ಅಲಿಯಾಸ್ ಅಚ್ಚು (40) ಬಂಧಿತ ಆರೋಪಿ.
ಘಟನೆ ಬಳಿಕ ಈತ ವಿದೇಶಕ್ಕೆ ಪರಾರಿಯಾಗಿದ್ದ. ಈತ 2012ರಲ್ಲಿ ನಡೆದಿದ್ದ ಕಾಂಚನಾ ಟೆಕ್ಸ್ಟೈಲ್ಸ್ ವ್ಯವಸ್ಥಾಪಕ ದೀಪಕ್ ಕೊಲೆ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ವಿದೇಶಕ್ಕೆ ಪರಾರಿಯಾಗಿದ್ದ ಆರೋಪಿ, ಅಲ್ಲಿಯೇ ತಲೆಮರೆಸಿ ಕೊಂಡಿದ್ದ. ಒಂದು ತಿಂಗಳಿನಿಂದ ಉಳ್ಳಾಲಕ್ಕೆ ವಾಪಸಾಗಿದ್ದು, ಬಹಿರಂಗವಾಗಿ ತಿರುಗಾಡುತ್ತಿದ್ದ. ಈ ಕುರಿತ ಮಾಹಿತಿ ಆಧರಿಸಿ ಮಂಗಳೂರು ದಕ್ಷಿಣ ಉಪ ವಿಭಾಗದ ಎಸಿಪಿ ಕೆ.ರಾಮರಾವ್ ನೇತೃತ್ವದ ರೌಡಿ ನಿಗ್ರಹ ದಳ ಆತನನ್ನು ಬಂಧಿಸಿದೆ. ಮುಂದಿನ ಕ್ರಮಕ್ಕಾಗಿ ಆರೋಪಿಯನ್ನು ಮಂಗಳೂರು ಉತ್ತರ ಠಾಣೆಯ ವಶಕ್ಕೆ ನೀಡಲಾಗಿದೆ.