ಪುತ್ತೂರು, ಅ 15 (DaijiworldNews/MS): ಪುತ್ತೂರು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ತುಳುನಾಡಿನ ವೀರ ಪುರುಷರಾದ ಕೋಟಿ-ಚೆನ್ನಯ ಹೆಸರು ಹೆಸರನ್ನಿಡುವ ಪ್ರಸ್ತಾಪಕ್ಕೆ ರಾಜ್ಯ ಸರಕಾರ ಅನುಮೋದನೆ ನೀಡಿದೆ.
ಶಾಸಕ ಸಂಜೀವ ಮಠಂದೂರು ಅವರ ಮುತುವರ್ಜಿಯಲ್ಲಿ ಪುತ್ತೂರು ಬಸ್ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರಿಡಲು ಸರಕಾರದ ಮೇಲೆ ಒತ್ತಡ ಹಾಕಲಾಗಿತ್ತು. ಪುತ್ತೂರು ನಗರಸಭೆಯ ಸಾಮಾನ್ಯ ಸಭೆಯಲ್ಲಿ ಕೋಟಿ ಚೆನ್ನಯ ಬಸ್ ನಿಲ್ದಾಣ ಎಂದು ಹೆಸರಿಡುವ ಸಂಬಂಧ ನಿರ್ಣಯ ಅಂಗೀಕರಿಸಿ ಸರಕಾರಕ್ಕೆ ಕಳುಹಿಸಲಾಗಿತ್ತು. ಈ ನಿರ್ಣಯದ ಪ್ರತಿಯನ್ನಿಟ್ಟುಕೊಂಡು ಶಾಸಕ ಸಂಜೀವ ಮಠಂದೂರು ತಮ್ಮ ಟಿಪ್ಪಣಿಯನ್ನೂ ಬರೆದು ಕೆಎಸ್ಸಾರ್ಟಿಸಿಗೆ ಸಲ್ಲಿಸಿದ್ದರು. ಕೆಎಸ್ಸಾರ್ಟಿಸಿ ಅಧ್ಯಕ್ಷರ ಜತೆ ಖುದ್ದು ಮಾತನಾಡಿದ್ದ ಶಾಸಕರು ಆವಶ್ಯತೆಯನ್ನು ಮನಗಾಣಿಸಿದ್ದರು. ಇದಾದ ಬಳಿಕ ಕೆಎಸ್ಸಾರ್ಟಿಸಿ ನಿರ್ದೇಶಕ ಮಂಡಳಿಯ ಸಭೆಯಲ್ಲಿ ಇದನ್ನು ಅಂಗೀಕರಿಸಿ ಸರಕಾರಕ್ಕೆ ಸಲ್ಲಿಸಲಾಗಿತ್ತು. ಇದೀಗ ಸರಕಾರದ ಅಧೀನ ಕಾರ್ಯದರ್ಶಿ(ಸಾರಿಗೆ ಇಲಾಖೆ) ಪುಷ್ಪ ವಿ. ಎಸ್. ಸುತ್ತೊಲೆ ಹೊರಡಿಸಿದ್ದಾರೆ.
ತುಳುನಾಡಿನ ಅವಳಿ ವೀರರಾದ ಕೋಟಿ ಚೆನ್ನಯ್ಯ ಅವರ ಹೆಸರನ್ನು ಬಸ್ ನಿಲ್ದಾಣಕ್ಕೆ ಇಟ್ಟಿರುವುದಕ್ಕೆ ಪುತ್ತೂರಿನ ನಾಗರಿಕರು ಸಂತಸ ವ್ಯಕ್ತಪಡಿಸಿದ್ದಾರೆ. ಕೋಟಿ ಚೆನ್ನಯ್ಯರಿಗೆ ಸಂಬಂಧಪಟ್ಟ ಪ್ರಮುಖ ಸ್ಥಳಗಳು ಪಡುಮಲೆ ಮತ್ತು ಗೆಜ್ಜೆಗಿರಿಗಳಲ್ಲಿ ಇರುವುದರಿಂದ ಪುತ್ತೂರಿನ ಬಸ್ ನಿಲ್ದಾಣಕ್ಕೆ ಕೋಟಿ ಚೆನ್ನಯ್ಯರ ಹೆಸರಿಡಬೇಕು ಎಂದು ಪ್ರಸ್ತಾಪವಿತ್ತು.