ಮಂಗಳೂರು, ಅ 14 (DaijiworldNews/DB): ಮೀನುಗಾರಿಕೆಗೆ ತೆರಳಿದ್ದ ಮೀನುಗಾರರೋರ್ವರು ಸಮುದ್ರದ ಅಲೆಗಳ ತೀವ್ರತೆಯಿಂದ ಆಯ ತಪ್ಪಿ ಬೋಟ್ನಿಂದ ಸಮುದ್ರಕ್ಕೆ ಬಿದ್ದು ನಾಪತ್ತೆಯಾದ ಘಟನೆ ನಡೆದಿದ್ದು, ವ್ಯಕ್ತಿ ಪತ್ತೆಯಾದಲ್ಲಿ ಮಾಹಿತಿ ನೀಡುವಂತೆ ಕೋರಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಕುಮುಟಾ ತಾಲೂಕಿನ ನಿವಾಸಿ ನಾಗರಾಜ (34) ನಾಪತ್ತೆಯಾದವರು. ನಾಗರಾಜ ಅವರು ಅಕ್ಟೋಬರ್ 5ರಂದು ಮಂಗಳೂರು ಬಂದರಿನಿಂದ 8 ಜನರ ತಂಡದೊಂದಿಗೆ ಬೋಟ್ನಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಅಕ್ಟೋಬರ್ 8ರ ಬೆಳಗ್ಗೆ 7.30ಕ್ಕೆ ಅರಬೀ ಸಮುದ್ರದ 92 ನಾಟಿಕಲ್ ಮೈಲ್ ದೂರದಲ್ಲಿ ಮೀನುಗಾರಿಕೆ ಮಾಡುತ್ತಿರುವಾಗ ಸಮುದ್ರದ ಅಲೆಗಳ ತೀವ್ರತೆಯಿಂದ ಆಯ ತಪ್ಪಿ ಬೋಟ್ನಿಂದ ಸಮುದ್ರಕ್ಕೆ ಬಿದ್ದು ಕಾಣೆಯಾಗಿದ್ದಾರೆ. ಮೀನುಗಾರ ಕಾಣೆಯಾಗಿರುವ ಬಗ್ಗೆ ಮಂಗಳೂರು ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಗರಾಜ ಅವರು 5.5 ಅಡಿ ಎತ್ತರವಿದ್ದು, ಎಣ್ಣೆ ಕಪ್ಪು ಮೈಬಣ್ಣ, ದುಂಡು ಮುಖ, ಧೃಡಕಾಯ ಶರೀರ ಹೊಂದಿದ್ದಾರೆ. ಹಳದಿ ಬಣ್ಣದ ಟಿ ಶರ್ಟ್ ಮತ್ತು ನೀಲಿ ಬಣ್ಣದ ಬರ್ಮುಡಾ ಚಡ್ಡಿ ಧರಿಸಿರುತ್ತಾರೆ.
ಈ ವ್ಯಕ್ತಿಯ ಬಗ್ಗೆ ಮಾಹಿತಿ ದೊರೆತಲ್ಲಿ 9480800574, 7019531957 ಅಥವಾ ಮಂಗಳೂರು ಕರಾವಳಿ ಕಾವಲು ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಠಾಣಾಧಿಕಾರಿಯವರು ಮನವಿ ಮಾಡಿದ್ದಾರೆ.