ಉಡುಪಿ, ಅ 14 (DaijiworldNews/DB): ಹಿಜಾಬ್ ಪ್ರಕರಣ ವಿಷಯದಲ್ಲಿ ಇಬ್ಬರು ನ್ಯಾಯಮೂರ್ತಿಗಳು ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ. ಪ್ರಕರಣದ ವಿಚಾರಣೆ ಸಂವಿಧಾನಿಕ ಪೀಠಕ್ಕೆ ವರ್ಗಾವಣೆ ಆಗಬಹುದು. ಸಂವಿಧಾನಿಕ ಪೀಠದಲ್ಲಿ ಹಿಜಾಬ್ ದೇಶಕ್ಕೆ ಬೇಕೋ ಬೇಡವೋ ಎಂದು ತೀರ್ಮಾನವಾಗುತ್ತದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಉಡುಪಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಎಲ್ಲಾ ಮಹಿಳೆಯರು ಸ್ವತಂತ್ರವಾಗಿ ಬದುಕಲು ನ್ಯಾಯಾಲಯ ಅವಕಾಶ ಮಾಡಿಕೊಡಬಹುದು. ಮುಸ್ಲಿಂ ಹೆಣ್ಣು ಮಕ್ಕಳು ಈ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡಬೇಕು. ಮನೆಯವರು, ಗಂಡಸರು ಹಿಜಾಬ್ಗೆ ಒತ್ತಾಯ ಮಾಡುತ್ತಿದ್ದಾರೆ. ಮುಸ್ಲಿಂ ಮಹಿಳೆಗೆ ಸ್ವಾತಂತ್ರ್ಯ ಸಿಗಬೇಕಾದರೆ ಹಿಜಾಬ್ಗೆ ಅವಕಾಶ ಕೊಡಬಾರದು ಎಂದರು.
ನಮ್ಮ ಮುಸ್ಲಿಂ ಹೆಣ್ಣು ಮಕ್ಕಳಿಗೆ ಶಿಕ್ಷಣ, ಉದ್ಯೋಗ ಸಿಗುವುದು ಮುಖ್ಯ. ಗಂಡಸರು ಹಾಕುವ ತಾಳಕ್ಕೆ ಕುಣಿದು ಇಚ್ಛೆಗೆ ವಿರುದ್ಧವಾಗಿ ನಡೆದುಕೊಳ್ಳಬೇಡಿ. ಪ್ರಗತಿಶೀಲ ದೇಶಗಳು ಧರ್ಮಗಳಲ್ಲಿ ಇರುವ ತಪ್ಪುಗಳನ್ನು ಗುರುತಿಸಿ ಸರಿ ಮಾಡಬೇಕು. ಇರಾನ್ನ ಮುಸ್ಲಿಂ ಮಹಿಳೆಯರು ಭಾರತಕ್ಕೆ ಮಾರ್ಗದರ್ಶಕ ಆಗಬೇಕು ಎಂದವರು ಈ ವೇಳೆ ಅಭಿಪ್ರಾಯಪಟ್ಟರು.
ಬಾಡಿ ಫಿಟ್ನೆಸ್ ಪ್ರದರ್ಶನ
ರಾಜ್ಯದಲ್ಲಿ ಭಾರತ್ ಜೋಡೋ ಯಾತ್ರೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ರಾಹುಲ್ ಗಾಂಧಿಯವರ ಬಾಡಿ ಫಿಟ್ನೆಸ್ ಪ್ರದರ್ಶನವಾಗುತ್ತಿದೆ. ದೇಶದ ನೇತೃತ್ವ ವಹಿಸಲು ರಾಹುಲ್ಗೆ ಸಾಧ್ಯವೇ? ಎಂದು ಪ್ರಶ್ನಿಸಿದರು.
ಪಕ್ಷದ ನೇತೃತ್ವ ವಹಿಸದವ ದೇಶದ ನೇತೃತ್ವ ವಹಿಸಲು ಸಾಧ್ಯವಿಲ್ಲ. ಮೋದಿಗೆ ಸರಿಸಾಟಿಯಾಗುವ ರಾಹುಲ್ ಕನಸು ಎಂದಿಗೂ ನನಸಾಗುವುದಿಲ್ಲ. ಬಾಡಿ ಫಿಟ್ನೆಸ್ ಇದ್ದಾರೆ, ಆದರೆ ದೇಶ ಆಳಲು ಮೆಂಟಲ್ ಫಿಟ್ನೆಸ್ ಇದ್ದಾರಾ ಎನ್ನುವುದನ್ನು ದೇಶದ ಜನ ತೀರ್ಮಾನ ಮಾಡ್ತಾರೆ ಎಂದು ಇದೇ ವೇಳೆ ಶೋಭಾ ಕರಂದ್ಲಾಜೆ ಟಾಂಗ್ ನೀಡಿದರು.