ಮಂಗಳೂರು, ಅ 14 (DaijiworldNews/HR): ಮಂಗಳೂರು ನಗರದ ಬೈಕಂಪಾಡಿ ಇಂಡಸ್ಟ್ರೀಯಲ್ ಏರಿಯಾದಲ್ಲಿರುವ ಬ್ರೈಟ್ ಪ್ಯಾಕೆಜಿಂಗ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪೆನಿಗೆ ಗುಜರಾತ್ನಿಂದ ಬರುತ್ತಿದ್ದ ಕೋಟ್ಯಾಂತರ ರೂಪಾಯಿ ಮೌಲ್ಯದ ಪ್ಲಾಸ್ಟಿಕ್ಗೆ ಬಳಸುತ್ತಿದ್ದ ಕಚ್ಚಾ ಸಾಮಾಗ್ರಿಗಳನ್ನು ಕದ್ದು ಕಂಪನಿಗೆ ವಂಚಿಸುತ್ತಿದ್ದ ಅದೇ ಕಂಪನಿಯ ಉದ್ಯೋಗಿ ಮತ್ತು ಇತರ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಮಂಗಳೂರಿನ ಕಾಪಿಕಾಡ್ ನಿವಾಸಿ ಮಹೇಶ್ ಕುಲಾಲ್ (38), ಮಂಗಳೂರಿನ ಶಕ್ತಿನಗರ ನಿವಾಸಿ ಅನಂತ ಸಾಗರ್ (39), ಮಂಗಳೂರು ಕಡಂದಲೆ ನಿವಾಸಿ ಸಾಯಿ ಪ್ರಸಾದ್ (35) ಮತ್ತು ತಮಿಳುನಾಡಿನ ಕಿರಣ್ ಸಮಾನಿ (53) ಎಂದು ಗುರುತಿಸಲಾಗಿದೆ,
ಆರೋಪಿ ಮಹೇಶ್ ಕುಲಾಲ್ ಕಳವು ಮಾಡಿ ಮಾರಾಟ ಮಾಡಿದ ಹಣದಲ್ಲಿ ಮಂಗಳೂರಿನ ವಿವಿಧ ಕಡೆಗಳಲ್ಲಿ ಜಮೀನು ಖರೀದಿ ಮಾಡಿದ್ದು, ಅಲ್ಲದೇ ಐಶಾರಾಮಿ ಕಾರುಗಳನ್ನು ಖರೀದಿ ಮಾಡಿ ಐಶಾರಾಮಿ ಜೀವನ ನಡೆಸುತ್ತಿದ್ದನು. ಅಲ್ಲದೇ ತನ್ನ ಪತ್ನಿಯ ಹೆಸರಿನಲ್ಲಿ ಬ್ಯಾಂಕ್ ನಲ್ಲಿ ಹಣ ಠೇವಣಿ ಇರಿಸಿ, ಇನ್ಸೂರೆನ್ಸ್, ಶೇರ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡಿರುತ್ತಾನೆ. ಅಲ್ಲದೇ ಪತ್ನಿಯ ಹೆಸರಿನಲ್ಲಿ ನಗರದ 3 ಕಡೆಗಳಲ್ಲಿ ಐಷಾರಾಮಿ ಸೆಲೂನ್ ಗಳನ್ನು ಹೊಂದಿದ್ದು, ಅನಂತ ಸಾಗರನು ಐಷಾರಾಮಿ ಮನೆಯನ್ನು ಕಟ್ಟಿಸಿ ಐಷಾರಾಮಿ ಕಾರನ್ನು ಖರೀದಿ ಮಾಡಿ ಐಶಾರಾಮಿ ಜೀವನ ಸಾಗಿಸುತ್ತಿದ್ದನು.
ಆರೋಪಿಗಳಿಂದದ ಮೊಬೈಲ್ ಪೋನ್ ಗಳು -6, ಲ್ಯಾಪ್ ಟಾಪ್ ಗಳು-4, ಕಂಪ್ಯೂಟರ್-1, ಮಹೇಶ್ ಕುಲಾಲ್ ನ ಹುಂಡೈ ಕಂಪೆನಿಯ ಕಾರು-1. ರೆನಾಲ್ಡ್ ಕಾರು -1, ಅನಂತ ಸಾಗರ್ ನಿಂದ ಕಿಯಾ ಕಂಪನಿಯ ಸೆಲ್ಟೋಸ್ ಕಾರು-1, ಟಾಟಾ ಕಂಪೆನಿಯ ಲಾರಿಯೊಂದನ್ನು ವಶಪಡಿಸಿಕೊಳ್ಳಲಾಗಿದ್ದು, ವಶಪಡಿಸಿಕೊಂಡ ಸೊತ್ತಿನ ಆಂದಾಜು ಮೌಲ್ಯ ರೂ. 74 ಲಕ್ಷ ಆಗಬಹುದು.
ಇನ್ನು ಪ್ರಕರಣದ ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನದಲ್ಲಿರುತ್ತಾರೆ. ಈ ಪ್ರಕರಣದಲ್ಲಿ ಇನ್ನೂ ಹಲವು ಆರೋಪಿಗಳು ಭಾಗಿಯಾಗಿದ್ದು, ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ.