ಬಂಟ್ವಾಳ, ಅ 13 (DaijiworldNews/DB): ಕಲ್ಲಡ್ಕದಲ್ಲಿ ನಡೆಯುತ್ತಿರುವ ಬಿ.ಸಿ ರೋಡು-ಹಾಸನ ಚತುಷ್ಪಥ ಹೆದ್ದಾರಿಯ ಫ್ಲೈ ಓವರ್ ಕಾಮಗಾರಿ ಸ್ಥಳದಲ್ಲಿ ಪಿಲ್ಲರ್ ನಿರ್ಮಾಣಕ್ಕಾಗಿ ಅಳವಡಿಸಿದ್ದ ಕಬ್ಬಿಣದ ಸಲಾಕೆಗಳು ಸಂಪೂರ್ಣವಾಗಿ ಭಾಗಿ ರಸ್ತೆಗೆ ಬಿದ್ದ ಘಟನೆ ಗುರುವಾರ ನಡೆದಿದೆ. ಅದೃಷ್ಡವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಫೈ ಓವರ್ಗೆ ಪಿಲ್ಲರ್ ನಿರ್ಮಾಣ ಕಾಮಗಾರಿ ಭರದಿಂದ ನಡೆಯುತ್ತಿದ್ದು, ಪಿಲ್ಲರ್ ನಿರ್ಮಾಣಕ್ಕಾಗಿ ಕಬ್ಬಿಣದ ಸಲಾಕೆಗಳನ್ನು ಜೋಡಿಸಲಾಗುತ್ತಿದೆ. ಕಲ್ಲಡ್ಕದಲ್ಲಿ ಈ ಕಬ್ಬಿಣದ ಸಲಾಕೆಗಳು ಸಂಪೂರ್ಣ ಭಾಗಿ ರಸ್ತೆಗೆ ಬಿದ್ದಿವೆ., ಘಟನೆ ವೇಳೆ ಯಾವುದೇ ವಾಹನ ಸಂಚಾರ ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದಂತಾಗಿದೆ. ಆದರೆ ಘಟನೆಯಲ್ಲಿ ಕೆಲವು ಕಾರ್ಮಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಧಾರಾಕಾರ ಮಳೆಯಿಂದಾಗಿ ಕಳೆದ ಕೆಲ ತಿಂಗಳಿನಿಂದ ಫ್ಲೈ ಓವರ್ ನಿರ್ಮಾಣ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದ್ದು, ಮೊದಲೇ ವಾಹನ ಸವಾರರು ಹಾಗೂ ಸಾರ್ವಜನಿಕರು ಹಲವು ರೀತಿಯಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ಕಾಮಗಾರಿ ತೀರಾ ಅವೈಜ್ಞಾನಿಕ ರೀತಿಯಲ್ಲಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿರುವ ನಡುವೆ ಈ ಘಟನೆ ನಡೆದಿರುವುದು ಸ್ಥಳೀಯರಲ್ಲಿ ಕಾಮಗಾರಿ ಗುಣಮಟ್ಟದ ಬಗ್ಗೆ ಅನುಮಾನ ಮೂಡಿಸಿದೆ.