ವಿಟ್ಲ, ಅ 13 (DaijiworldNews/DB): ವಿಟ್ಲದ ವಾಚ್ ರಿಪೇರಿ ಅಂಗಡಿಯೊಂದರ ಶಟರ್ನಲ್ಲಿ ಕಿಡಿಗೇಡಿಗಳು ನೇಮ್ ಜಿಹಾದ್ (Name jihad) ಎಂದು ಬರೆದಿರುವುದು ಕಂಡು ಬಂದಿದೆ.
ವಿಟ್ಲ ಪೇಟೆಯ ಹೃದಯ ಭಾಗದಲ್ಲಿರುವ ಅಬ್ದುಲ್ ವಿಟ್ಲ ಅವರ ದೀಪಕ್ ವಾಚ್ ವರ್ಕ್ಸ್ ಅಂಗಡಿಯ ಶಟರ್ನಲ್ಲಿ ಇದನ್ನು ಬರೆಯಲಾಗಿದ್ದು, ಮಂಗಳವಾರ ರಾತ್ರಿ ಬರೆದಿರಬಹುದು ಎನ್ನಲಾಗಿದೆ. ಅ.11ರಂದು ರಾತ್ರಿ ಅಂಗಡಿ ಮಾಲಕರು ಅಂಗಡಿಯ ಶಟರ್ ಹಾಕಿ ಹೋಗಿದ್ದು, ಅ.12ರ ಬುಧವಾರ ಬೆಳಗ್ಗೆ ಬಾಗಿಲು ತೆಗೆಯಲು ಮುಂದಾದಾಗ ಶಟರ್ ಮೇಲೆ ನೇಮ್ ಜಿಹಾದ್ ಎಂದು ಬರೆದಿರುವುದು ಕಂಡು ಬಂದಿದೆ.
ಕೂಡಲೇ ಮಾಲಕ ಅಬ್ದುಲ್ ವಿಟ್ಲ ಅವರು ಈ ಕುರಿತು ವಿಟ್ಲ ಠಾಣೆಗೆ ದೂರು ನೀಡಿದ್ದಾರೆ. ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದಾಗ ಆಗಂತುಕರಿಬ್ಬರು ಬರುತ್ತಿರುವುದು ಕಂಡು ಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.