ಉಳ್ಳಾಲ,ಫೆ,15(MSP): ಮಲ್ಪೆ ಬಂದರಿನಿಂದ ಹೊರಟು 64 ದಿನಗಳಾದರೂ ಪತ್ತೆಯಾಗದ ಏಳು ಮಂದಿ ಮೀನುಗಾರರು ಇದ್ದ ಸುವರ್ಣ ತ್ರಿಭುಜ ಬೋಟಿನ ನಿಖರತೆಯನ್ನು ತನಿಖೆ ಕೈಗೆತ್ತಿಕೊಂಡಿರುವ ಕೇಂದ್ರ ಹಾಗೂ ರಾಜ್ಯ ಸರಕಾರದ ತಂಡಗಳು ನಾಪತ್ತೆಯಾದ ಮೀನುಗಾರರ ಕುಟುಂಬಗಳಿಗೆ ನೀಡುವಂತೆ ಕಡಲತೀರ ಉಳ್ಳಾಲದ ಪತ್ರಕರ್ತರ ತಂಡ ಪಣಂಬೂರು ಸಮುದ್ರ ತೀರದಲ್ಲಿ ಮರಳು ಕಲಾಕೃತಿ ರಚಿಸುವ ಮೂಲಕ ಜಾಗೃತಿ ಮೂಡಿಸಿತು.
‘ಸೇವ್ ಸುವರ್ಣ ತ್ರಿಭುಜ’ ಅನ್ನುವ ಸಂದೇಶದ ಜೊತೆಗೆ ಎರಡು ಮತ್ಸ್ಯದ ಆಕಾರಗಳ ಒಳಗೆ ಇಬ್ಬರು ಮಲಗಿರುವ ಸ್ಥಿತಿಯಲ್ಲಿ ಮರಳು ಶಿಲ್ಪವನ್ನು ರಚಿಸಲಾಗಿತ್ತು. ಘಟನೆ ನಡೆದ ಸಂದರ್ಭದಲ್ಲಿ ಪ್ರಕರಣವನ್ನು ಸರಕಾರಗಳು ಲಘುವಾಗಿ ಪಡೆದುಕೊಂಡಿತ್ತು. ಬಳಿಕ ಮೀನುಗಾರರ ಬೃಹತ್ ಹೋರಾಟದ ಪರಿಣಾಮವಾಗಿ ಸರಕಾರ ಜಾಗೃತವಾಗಿ ತನಿಖಾ ತಂಡಗಳನ್ನು ರಚಿಸಿ ಮೀನುಗಾರರ ಮತ್ತು ಬೋಟಿನ ಶೋಧ ಕಾರ್ಯ ನಡೆಸಲು ಆರಂಭಿಸಿತ್ತು. ಕೇಂದ್ರ ಸರಕಾರವೂ ಇತ್ತೀಚೆಗೆ ಆಧುನಿಕ ತಂತ್ರಜ್ಞಾನವುಳ್ಳ ನೌಕಾಸೇನೆಯ ಹಡಗಿನ ಮೂಲಕ ಶೋಧ ಕಾರ್ಯ ಆರಂಭಿಸಿದೆ. ಈ ನಡುವೆ ಮಹಾರಾಷ್ಟ್ರ ರತ್ನಗಿರಿ ಸಹಿತ ವಿವಿದೆಡೆ ಪತ್ತೆಯಾಗಿದೆ ಅನ್ನುವ ಸುದ್ಧಿಗಳು ವ್ಯಾಪಕವಾಗಿ ಹರಡಿತ್ತು. ಇದರಿಂದ ಮೀನುಗಾರರ ಕುಟುಂಬದವರು ಗೊಂದಲ ಮತ್ತು ಹೆಚ್ಚು ಆತಂಕಕ್ಕೆ ಒಳಗಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ನಿಟ್ಟಿನಲ್ಲಿ ಅತಿಶೀಘ್ರವಾಗಿ ತನಿಖಾ ತಂಡಗಳು ಬೋಟು ಮತ್ತು ಮೀನುಗಾರರು ಸುರಕ್ಷಿತವಾಗಿ ಪತ್ತೆಹಚ್ಚುವಂತೆಯೂ, ಗೊಂದಲಗಳಿಗೆ ತೆರೆ ಎಳೆಯುವಂತೆ ಉಳ್ಳಾಲದ ಪತ್ರಕರ್ತರ ಆರು ಜನರ ತಂಡ ಮರಳು ಕಲಾಕೃತಿ ರಚಿಸುವ ಮೂಲಕ ಜಾಗೃತಿ ಮೂಡಿಸಿತು.
ತಂಡದಲ್ಲಿ ವರದಿಗಾರರುಗಳಾದ ಸತೀಶ್ ಪುಂಡಿಕಾಯಿ,ಆರೀಫ್ ಕಲ್ಕಟ್ಟ, ದಾಯ್ಜಿವರ್ಲ್ಡ್ನ ಮೋಹನ್ ಕುತ್ತಾರ್, ಅಶ್ವಿನ್ ಕುತ್ತಾರ್, ತೇಜೇಶ್ ಗಟ್ಟಿ , ಶಿವಶಂಕರ್ ಇದ್ದರು.