ಉಡುಪಿ, ಅ 13 (DaijiworldNews/DB): ಹಿಜಾಬ್ ಕುರಿತಾಗಿ ದ್ವಿಸದಸ್ಯ ಪೀಠದಿಂದ ವಿಭಿನ್ನ ಅಭಿಪ್ರಾಯಗಳು ಬಂದಿವೆ. ಫಿಫ್ಟಿ ಫಿಫ್ಟಿ ತೀರ್ಪು ಬರಬಹುದು ಎಂಬ ನಿರೀಕ್ಷೆ ಮೊದಲೇ ಇತ್ತು. ನ್ಯಾಯ ವ್ಯವಸ್ಥೆಗೆ ನಾವು ಸಲಾಂ ಕೊಡುತ್ತೇವೆ ಎಂದು ಸುಪ್ರೀಂ ಕೋರ್ಟ್ ಅರ್ಜಿದಾರ, ಎಪಿಸಿಆರ್ ಸಂಚಾಲಕ ಹುಸೇನ್ ಕೋಡಿಬೆಂಗ್ರೆ ಹೇಳಿದ್ದಾರೆ.
ಹಿಜಾಬ್ ಕುರಿತ ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠ ವಿಭಿನ್ನ ತೀರ್ಪು ಪ್ರಕಟಿಸಿರುವ ಕಾರಣ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಯಥಾಸ್ಥಿತಿಯಲ್ಲಿಟ್ಟಿರುವ ಸುಪ್ರೀಂ ಕೋರ್ಟ್ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ನ್ಯಾಯಯುತ ಮತ್ತು ಮೂಲಭೂತ ಹಕ್ಕಿಗೆ ನಮ್ಮ ಭಾರತದಲ್ಲಿ ಅವಕಾಶವಿದೆ ಎಂದು ಇವತ್ತು ಸಾಬೀತಾಗಿದೆ. ಹೆಣ್ಣು ಮಕ್ಕಳಿಗೆ ಹೆಚ್ಚು ಶೈಕ್ಷಣಿಕವಾಗಿ ಸಹಾಯ ಮಾಡಬೇಕು, ತುಳಿಯಬಾರದು. ಮೂಲಭೂತ ಹಕ್ಕಿಗೆ ಮಾನ್ಯತೆ ಕೊಡಬೇಕು ಎಂದು ಕೋರ್ಟ್ನಲ್ಲಿ ಚರ್ಚೆಯಾಗಿದೆ. ಸಂತ್ರಸ್ಥರ ಪರವಾಗಿ ಹಲವಾರು ಅಂಶಗಳು ಚರ್ಚೆಗೆ ಬಂದಿವೆ. ಮಕ್ಕಳ ಮೂಲಭೂತ ಹಕ್ಕು ಮತ್ತು ಶಿಕ್ಷಣಕ್ಕೆ ಕೋರ್ಟ್ ಸಹಕಾರ ನೀಡುತ್ತದೆ ಎಂಬ ನಂಬಿಕೆ ಇದೆ ಎಂದರು.
ದ್ವಿ ಸದಸ್ಯ ಪೀಠಕ್ಕೆ ನಾವು ಗೌರವ ಸಲ್ಲಿಸುತ್ತೇವೆ. ಫಿಫ್ಟಿ ಫಿಫ್ಟಿ ತೀರ್ಪು ಬರಬಹುದು ಎಂಬ ನಿರೀಕ್ಷೆ ಮೊದಲೇ ಇತ್ತು. ದೇಶದ ಸಾವಿರಾರು ವಿದ್ಯಾರ್ಥಿನಿಯರ ಶಿಕ್ಷಣದ ವಿಚಾರ ಇದು. ಸಂವಿಧಾನದಲ್ಲಿ ಶಿಕ್ಷಣಕ್ಕೆ ಅವಕಾಶ ಇದೆ ಎಂದು ಭಾವಿಸುತ್ತೇವೆ ಎಂದು ಪ್ರತಿಕ್ರಿಯಿಸಿದರು.