ಕಲ್ಲಡ್ಕ, ಫೆ 14(SM): ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಸಹೋದರ ಪ್ರಹ್ಲಾದ್ ಮೋದಿ ಭೇಟಿ ನೀಡಿ ಇಲ್ಲಿನ ಶೈಕ್ಷಣಿಕ ಚಟುವಟಿಕೆಗಳನ್ನು ವೀಕ್ಷಿಸಿ ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿದರು. ಇದೇ ವೇಳೆ ಶಿಶುಮಂದಿರದ ಚಟುವಟಿಕೆಗಳನ್ನು ವೀಕ್ಷಿಸಿದ ಅವರು ಇಲ್ಲಿ ಜೀವನ ಕೌಶಲ್ಯದ ಶಿಕ್ಷಣವನ್ನು, ಸಂಸ್ಕಾರ ಹಾಗೂ ಭಾರತೀಯ ನೆಲೆಗಟ್ಟಿನ ಆಧಾರದಲ್ಲಿ ನೀಡಲಾಗುತ್ತಿದೆ. ಸಂಸ್ಕೃತದ ವ್ಯವಹಾರ ಉತ್ತರ ಭಾಗಕ್ಕಿಂತ ಹೆಚ್ಚು ಬಳಕೆಯಲ್ಲಿದೆ ಎಂದರು.
ಈ ಸಂದರ್ಭ ಮಾತನಾಡಿದ ಅವರು, ವ್ಯಕ್ತಿ ಪ್ರತಿಷ್ಠೆಗಿಂತ ದೇಶವೇ ದೊಡ್ಡದು. ವ್ಯಕ್ತಿಯೊಬ್ಬ ಯಾವ ಮಟ್ಟಕ್ಕೆ ಏರಿದರೂ ಕೂಡಾ ದೇಶದ ಮುಂದೆ ಎಲ್ಲರೂ ಸಮಾನರು. ತಾನು ಇರುವ ಹುದ್ದೆಯ ಜವಾಬ್ದಾರಿ ಅರಿತು ವ್ಯವಹರಿಸಿದರೆ ಆತ ಶ್ರೇಷ್ಟನಾಗುವ ಎಂದಿದ್ದಾರೆ.
ದಕ್ಷಿಣ ಭಾರತದ ಜನರ ಬಗ್ಗೆ ನನಗಿದ್ದ ಭಾವನೆ ನನಗೀಗ ಬದಲಾಗಿದೆ. ಇಲ್ಲಿನ ಜನ ಪ್ರೇಮಪೂರ್ಣ, ಸೌಹಾರ್ದಯುತ, ಭಾವನಾ ಜೀವಿಗಳಾಗಿರುವುದು ನನ್ನ ಅರಿವಿಗೆ ಬಂದಿದೆ. ನರೇಂದ್ರ ಮೋದಿಯವರದ್ದು ಸಮಾಜ ಸಮರ್ಪಕ ಬದುಕು, ದೇಶದ ಬಗೆಗಿನ ಅವರ ಕಾಳಜಿ ದೊಡ್ಡದು. ಬಾಲ್ಯದಿಂದಲೂ ಪ್ರತಿಯೊಂದು ಕಾಲದಲ್ಲೂ ಶಿಶ್ತು ಬದ್ಧ ಜೀವನ ನಡೆಸಿದ್ದರು. ನಮಗ್ಯಾರಿಗೂ ಅವರ ಹುದ್ದೆಯ ನಡುವೆ ನಾವೂ ಗುರುತಿಸಿಕೊಳ್ಳುವಂತಾಗಬೇಕು ಎಂದು ಅನಿಸಲೇ ಇಲ್ಲ. ಆದರೆ ಸಮಾಜ ನಮ್ಮನ್ನು ವಿಶೇಷ ಆದರದಿಂದ ಕಾಣುತ್ತಿರುವುದರ ಬಗ್ಗೆ ಸಂತೋಷವಿದೆ. ಆದರೆ ಎಲ್ಲೂ ನಮ್ಮ ಕುಟುಂಬವು ಅವರ ಜವಾಬ್ದಾರಿ ನಿರ್ವಹಣೆಗೆ ತೊಡಕಾಗದಂತೆ ಎಚ್ಚರವಹಿಸಿದೆ ಎಂದು ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿದರು.