ಮಂಗಳೂರು, ಅ 13 (DaijiworldNews/DB): ಮಂಗಳೂರಿನ ವಿವಿಧೆಡೆ ಇರುವ ನಿಷೇಧಿತ ಪಿಎಫ್ಐ ಮತ್ತು ಎಸ್ಡಿಪಿಐ ನಾಯಕರ ಮನೆಗೆ ಇಂದು ಬೆಳ್ಳಂಬೆಳಗ್ಗೆ ಮತ್ತೆ ಪೊಲೀಸರು ಧಾಳಿ ನಡೆಸಿದ್ದು, ಮನೆಗಳಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಈ ವೇಳೆ ಐದು ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ನೇತೃತ್ವದಲ್ಲಿ ಪಣಂಬೂರು, ಉಳ್ಳಾಲ, ಬಜಪೆ ಠಾಣಾ ವ್ಯಾಪ್ತಿಯ 9 ಕಡೆ ಧಾಳಿ ನಡೆಯಿತು. ಎಸ್ಡಿಪಿಐ ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ ಅವರನ್ನು ಬಂಧಿಸುವ ಸಲುವಾಗಿ ಅವರ ಮನೆ ಮೇಲೆಯೂ ದಾಳಿ ನಡೆದಿದೆ. ವಿಶೇಷ ತಂಡಗಳನ್ನು ರಚಿಸಿ ಪೊಲೀಸರು ಈ ಧಾಳಿ ನಡೆಸಿದ್ದು, ಧಾಳಿ ವೇಳೆ ಐದು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರ ವಿರುದ್ದ ಯುಎಪಿಎ ಆಕ್ಟ್, ಸೆಕ್ಷನ್ 121 ಸೇರಿ ವಿವಿಧ ಐಪಿಸಿ ಸಕ್ಷೆನ್ ಅಡಿ ಪ್ರಕರಣ ದಾಖಲಿಸಲಾಗಿದೆ.
ಇನ್ನು ಪಣಂಬೂರು ಠಾಣಾ ವ್ಯಾಪ್ತಿಯಲ್ಲಿ ಮೊಹಮ್ಮದ್ ರಫೀಕ್ ಅಲಿಯಾಸ್ ಶಾರ್ಟ್ ರಫೀಕ್ ಜೋಕಟ್ಟೆ, ಮೊಹಮ್ಮದ್ ಬಿಲಾಲ್ ಕಸಬಾ ಬೆಂಗ್ರೆ, ಉಳ್ಳಾಲ ಠಾಣೆ ಪೊಲೀಸರು ಮೊಹಮ್ಮದ್ ರಫೀಕ್, ಅಬ್ಬಾಸ್ ಕಿನ್ಯಾ ಎಂಬವರನ್ನು ವಶಪಡಿಸಿಕೊಂಡಿದ್ದಾರೆ. ಕಂಕನಾಡಿ ಗ್ರಾಮಾಂತರ ಪೊಲೀಸರು ಅಕ್ಬರ್ ಸಿದ್ದಿಕ್ ಎಂಬಾತನನ್ನು ಅಡ್ಯಾರ್ನಿಂದ ವಶಕ್ಕೆ ತೆಗೆದುಕೊಂಡಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.
ಕಳೆದ ಸೆಪ್ಟಂಬರ್ 27ರಂದು ಕೂಡಾ ಇಂತಹುದೇ ಧಾಳಿ ನಡೆದಿದ್ದು, ಆ ವೇಳೆ ಪೊಲೀಸರಿಗೆ ಬೇಕಾಗಿದ್ದ 26 ಮಂದಿಯ ಪೈಕಿ 12 ಮಂದಿ ತಪ್ಪಿಸಿಕೊಂಡಿದ್ದು, ಅವರಿಗಾಗಿ ಹುಡುಕಾಟ ನಡೆದಿದೆ ಎಂದು ತಿಳಿದು ಬಂದಿದೆ.