ಕುಂದಾಪುರ, ಫೆ 14(SM): ಕೋಟದ ಮಣೂರು ಚಿಕ್ಕನಕೆರೆ ಎಂಬಲ್ಲಿ ಜನವರಿ ೨೬ರಂದು ಬರ್ಬರವಾಗಿ ಹತ್ಯೆಯಾದ ಯತೀಶ್ ಹಾಗೂ ಭರತ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಚಂದ್ರಶೇಖರ ರೆಡ್ಡಿಯನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಚಂದ್ರಶೇಖರ ರೆಡ್ಡಿ ಪೊಲೀಸರಿಗೆ ಶರಾಣಗತಿಯಾಗಿದ್ದಾನೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಹತ್ಯೆಯಾದ ಯತೀಶ್ ಕಾಂಚನ್ ಹಾಗೂ ಭರತ್ ಶ್ರೀಯಾನ್
ಹತ್ಯೆ ಪ್ರಕರಣ ನಡೆದು ಹತ್ತೊಂಭತ್ತು ದಿನಗಳ ತನಕ ತಲೆ ಮರೆಸಿಕೊಂಡಿದ್ದ ಚಂದ್ರಶೇಖರ ರೆಡ್ಡಿ ಬುಧವಾರ ಕುಂದಾಪುರದ ವಕೀಲ ರವಿಕಿರಣ್ ಮುರ್ಡೇಶ್ವರ ಅವರ ಕಚೇರಿಯಲ್ಲಿ ಪ್ರತ್ಯಕ್ಷನಾಗಿದ್ದ. ಆದರೆ ಆತನ ಫೋಟೋವನ್ನು ನೋಡದೇ ಇದ್ದ ಇತರ ಕಕ್ಷಿದಾರರಿಗೆ ಆರೋಪಿಯ ಬಗ್ಗೆ ಸುಳಿವು ಸಿಕ್ಕಿರಲಿಲ್ಲ. ಅಂತಿಮವಾಗಿ ವಕೀಲರ ಬಳಿ ಶರಣಾಗತಿಯಾಗುವುದಾಗಿ ತಿಳಿಸಿದ್ದು, ವಕೀಲರು ಎಸ್ಪಿಯವರನ್ನು ಸಂಪರ್ಕಿಸಲು ಯತ್ನಿಸಿದ್ದರು. ಆದರೆ ಅದು ಸಾಧ್ಯವಾಗದಾಗ ತನಿಖಾಧಿಕಾರಿ ಜಯಶಂಕರ್ ಅವರನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದರು.
ಆದರೆ ಸಂಜೆಯಾದರೂ ಪೊಲೀಸರು ಬರದೇ ಇದ್ದಾಗ ನ್ಯಾಯಾಲಯದ ಅವಧಿ ಮುಗಿಯುತ್ತದೆ ಎಂದು ಮನಗಂಡ ಆರೋಪಿ ಚಂದ್ರಶೇಖರ್ ರೆಡ್ಡಿ ಕೋಟ ಠಾಣೆಯಲ್ಲಿ ತಾನೇ ಶರಣಾಗತಿಯಾಗುವುದಾಗಿ ತಿಳಿಸಿ ಹೊರನಡೆದಿದ್ದ ಎಂದು ವಕೀಲರು ತಿಳಿಸಿದ್ದಾರೆ. ಬಳಿಕ ಬಂದ ಪೊಲೀಸರಿಗೆ ಆರೋಪಿ ನಾಪತ್ತೆಯಾಗಿರುವುದು ತಿಳಿದು ನಾಕಾಬಂದಿ ರಚಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಚಂದ್ರಶೇಖರ ರೆಡ್ಡಿ ಬಂಧನದ ಮೂಲಕ ಬಂಧಿತ ಆರೋಪಿಗಳ ಸಂಖ್ಯೆ 14ಕ್ಕೆ ಏರಿಕೆಯಾಗಿದೆ.
ಆದರೆ ಪ್ರಕರಣದ ಪ್ರಮುಖ ಆರೋಪಿ ಎಂದು ಬಿಂಬಿಸಲಾದ ಹರೀಶ್ ರೆಡ್ಡಿಯ ಹೆಸರನ್ನು ದೂರುದಾರರು ನಮೂದಿಸಿಲ್ಲ ಎನ್ನುವ ಅಂಶ ಇದೀಗ ಬೆಳಕಿಗೆ ಬಂದಿದೆ.