ಬಂಟ್ವಾಳ, ಅ 12 (DaijiworldNews/SM): ಕಿಡ್ನಿ ಸಮಸ್ಯೆಯಲ್ಲಿರುವ ಇಬ್ಬರು ಮಕ್ಕಳ ಚಿಕಿತ್ಸೆ ಹಾಗೂ ಬಡ ಕುಟುಂಬದ ಯುವತಿಯೊಬ್ಬಳ ಮದುವೆಗೆ ನೆರವು ನೀಡುವ ಉದ್ದೇಶದಿಂದ ೨೦ ಸಾವಿರ ರೂ.ಗಳ ಗುರಿಯೊಂದಿಗೆ ನವರಾತ್ರಿಯ ಸಂದರ್ಭದಲ್ಲಿ ಪ್ರೇತದ ವೇಷ ಹಾಕಿ ಊರೂರು ಸಂಚರಿಸಿದ್ದ ಸರಪಾಡಿಯ ದೇವದಾಸ್ ನಾಯ್ಕ್ ಅವರಿಗೆ ಸಂಗ್ರಹಗೊಂಡದ್ದು ಬರೋಬ್ಬರಿ 57 ಸಾವಿರ ರೂ.
ಅ. 12ರಂದು ಅವರು ಮೊತ್ತವನ್ನು ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದಲ್ಲಿ ಸಂಬಂಧಪಟ್ಟ ಕುಟುಂಬಗಳಿಗೆ ಹಸ್ತಾಂತರಿಸಿದರು. ಕ್ಷೇತ್ರದ ಪ್ರಧಾನ ಅರ್ಚಕ ಶಂಕರನಾರಾಯಣ ಹೊಳ್ಳ ಪ್ರಾರ್ಥನೆಯ ಮೂಲಕ ಹಾರೈಸಿದರು. ಕಿಡ್ನಿ ಸಂಬಂಧಿ ಖಾಯಿಲೆಯಿಂದ ಬಳಲುತ್ತಿರುವ ಕಲ್ಲಡ್ಕ ನಿವಾಸಿ ಇಬ್ಬರು ಮಕ್ಕಳ ಕುಟುಂಬಕ್ಕೆ 30 ಸಾವಿರ ರೂ. ಹಾಗೂ ಮಣಿನಾಲ್ಕೂರು ಗ್ರಾಮ ನಿವಾಸಿ ಯುವತಿಯ ಮದುವೆಗೆ 20 ಸಾವಿರ ರೂ. ನೀಡಿದರು.
ಉಳಿದಂತೆ ಸುಮಾರು 7 ಸಾವಿರ ರೂ.ಮೊತ್ತವನ್ನು ಸರಪಾಡಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಹಸ್ತಾಂತರಿಸಿದರು. ಮೊತ್ತ ಹಸ್ತಾಂತರದ ವೇಳೆ ದೇವಸ್ಥಾನದ ಅರ್ಚಕ ಜಯರಾಮ ಕಾರಂತ, ಸ್ಥಳೀಯ ಪ್ರಮುಖರಾದ ಉಮೇಶ್ ಆಳ್ವ ಕೊಟ್ಟುಂಜ, ಸುರೇಶ್ ಶೆಟ್ಟಿ ಮೀಯಾರು, ದಿನೇಶ್ ಗೌಡ ನೀರೊಲ್ಬೆ, ಆನಂದ ಶೆಟ್ಟಿ ಬಾಚಕೆರೆ, ಶುಭಕರ ರೈ ಕೊಟ್ಟುಂಜ, ಗಿರೀಶ್ ನಾಯ್ಕ್ ನೀರಪಲ್ಕೆ, ಸತೀಶ್ ಗೌಡ ಕೊಪ್ಪಲ, ನಾರಾಯಣ ದೇವಾಡಿಗ ಹೊಳ್ಳರಗುತ್ತು, ಚಂದ್ರಶೇಖರ ನಾಯ್ಕ್, ದೇವದಾಸ್ ಅವರ ತಾಯಿ ಲಕ್ಷ್ಮೀ ಮೊದಲಾದರಿದ್ದರು.