ಬಂಟ್ವಾಳ, ಅ 12 (DaijiworldNews/DB): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಬುಧವಾರ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಹಾರ್ತಿಕೋಟೆ ಗ್ರಾಮದಿಂದ ಸಾನಿಕೆರೆ ಪ್ರದೇಶದಲ್ಲಿ ಸಾಗಿದ್ದು, ಈ ಸಂದರ್ಭದಲ್ಲಿ ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಸಚಿವ ಬಿ. ರಮಾನಾಥ ರೈ ಅವರು ರಾಹುಲ್ ಅವರೊಂದಿಗೆ ಹೆಜ್ಜೆ ಹಾಕಿದರು.
ಅ 10 ರಿಂದ ನಡೆದ ಯಾತ್ರೆಯಲ್ಲಿ ಹಿರಿಯೂರು ಭಾಗದಲ್ಲಿ ನಡೆದ ಯಾತ್ರೆಗೆ ಬಿ. ರಮಾನಾಥ ರೈ ಅವರು ಉಸ್ತುವಾರಿಯಾಗಿದ್ದು, ಮುಂದೆ ಕರ್ನಾಟಕದಲ್ಲಿ ಸಾಗಲಿರುವ ಯಾತ್ರೆಯಲ್ಲಿ ಪೂರ್ಣವಾಗಿ ತೊಡಗಿಸಿಕೊಳ್ಳಲಿದ್ದಾರೆ. ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ಹಲವು ವಿಚಾರಗಳ ಕುರಿತು ರೈ ಅವರ ಜತೆ ಚರ್ಚೆ ನಡೆಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದರು. ಮಂಗಳವಾರ ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ಕುಮಾರ್, ವಿಧಾನ ಪರಿಷತ್ ಸದಸ್ಯ ಡಾ| ಮಂಜುನಾಥ ಭಂಡಾರಿ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ, ಜಿಲ್ಲಾ ಕಾಂಗ್ರೆಸ್ ಸಹಕಾರಿ ಘಟಕದ ಸಂಚಾಲಕ ಸುದರ್ಶನ್ ಜೈನ್, ಪ್ರಮುಖರಾದ ಪದ್ಮನಾಭ ಕೋಟ್ಯಾನ್, ಆರ್.ಕೆ. ಪೃಥ್ವಿರಾಜ್ ಮೊದಲಾದವರು ಯಾತ್ರೆಯಲ್ಲಿ ಭಾಗವಹಿಸಿದ್ದರು.
ಇಂದಿನಿಂದರಾಜ್ಯದಲ್ಲಿ ಸಾಗುವ ಯಾತ್ರೆಯಲ್ಲಿ ಬಂಟ್ವಾಳ ಸೇರಿದಂತೆ ಜಿಲ್ಲೆಯ ಹಲವು ನಾಯಕರು, ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.