ಉಡುಪಿ, ಅ 12 (DaijiworldNews/MS): ಉಡುಪಿಯ ಕೋಟೆಶ್ವರದಲ್ಲಿ ನಿರುಪಯುಕ್ತವಾಗಿದ್ದ ನೀರಿನ ಬೃಹತ್ ಟ್ಯಾಂಕ್ ಒಂದು ಹೆದ್ದಾರಿಗೆ ಉರುಳಿಬಿದ್ದಿದೆ ಎಂದು ಬಿಂಬಿಸಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆದರೆ ವಾಸ್ತವವಾಗಿ ಸುರಕ್ಷಿತ ಕ್ರಮ ತೆಗೆದುಕೊಂಡೇ ಗ್ರಾಮ ಪಂಚಾಯತ್ ಈ ಬೃಹತ್ ನೀರಿನ ಟ್ಯಾಂಕ್ ಅನ್ನು ತೆರವುಗೊಳಿಸಿದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಹೈವೆಗೆ ನೀರಿನ ಟ್ಯಾಂಕ್ ಬಿದ್ದು ಅವಘಡ ಸಂಭವಿಸಿದೆ ಎಂದು ವಿಡಿಯೋ ವೈರಲ್ ಆಗುತ್ತಿದೆ. ಕಳೆದ ಹತ್ತು ವರ್ಷಗಳಿಂದ ನಿರುಪಯುಕ್ತವಾಗಿದ್ದ ನೀರಿನ ಬೃಹತ್ ಟ್ಯಾಂಕ್ನ್ನು ಸತತ 9 ಗಂಟೆಗಳ ಕಾರ್ಯಾಚರಣೆ ನಡೆಸಿ, ಕೋಟೇಶ್ವರ ಗ್ರಾಮ ಪಂಚಾಯತ್ ವಿವಿಧ ಇಲಾಖೆಗಳ ಸಹಕಾರದಲ್ಲಿ ತೆರವುಗೊಳಿಸಿತ್ತು. ಈ ವೇಳೆ ಸುರಕ್ಷಿತ ಕ್ರಮ ಕೈಗೊಂಡು ರಾಷ್ಟ್ರೀಯ ಹೆದ್ದಾರಿಯನ್ನು ಕೂಡ ಕೆಲ ನಿಮಿಷಗಳ ಕಾಲ ಬಂದ್ ಮಾಡಲಾಗಿದ್ದು, ಹೀಗಾಗಿ ಯಾವುದೇ ದುರ್ಘಟನೆ ಸಂಭವಿಸಿಲ್ಲ. ಸದ್ಯ ನೀರಿನ ಟ್ಯಾಂಕ್ ಮಗುಚಿ ಬೀಳುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ಜನ ಇದನ್ನು ಬೇರೆ ರೀತಿಯಲ್ಲಿ ವ್ಯಾಖ್ಯಾನಿಸುತ್ತಿದ್ದಾರೆ.
ಇನ್ನು ಟ್ಯಾಂಕ್ ಅನ್ನು ತೆರವುಗೊಳಿಸಲಾಗುವುದು ಎಂಬುವುದಾಗಿ ಒಂದು ದಿನ ಮುಂಚೆಯೇ ಕೋಟೇಶ್ವರ ಗ್ರಾಮ ಪಂಚಾಯತ್ ಸಾರ್ವಜನಿಕರಿಗೆ ಸೂಚನೆಯನ್ನು ಕೂಡಾ ನೀಡಿತ್ತು.