ಮಂಗಳೂರು, ಫೆ 14(MSP): 'ವೆಲೆಂಟೈನ್ಸ್ ಡೇ' ಪ್ರಯುಕ್ತ 'ರಿಯಲ್ ಸೂಪರ್ ಹೀರೋ' ಎನ್ನುವ ವಿಶೇಷ ಕಾರ್ಯಕ್ರಮವನ್ನು ನಗರದಲ್ಲಿ ದಾಯ್ಜಿವಲ್ಡ್ ಸಹಯೋಗದೊಂದಿಗೆ, ಲೀ ಎಂಟರ್ಟೈನ್ಮೆಂಟ್ ಸಂಸ್ಥೆ ಹಾಗೂ ಅರೇನಾ ಆನಿಮೇಷನ್ ಸಂಸ್ಥೆಯೂ ಫೆ.14 ರ ಗುರುವಾರ ನಗರದಲ್ಲಿ ಆಯೋಜಿಸಿತ್ತು. ಜ್ಯೋತಿ ವೃತ್ತದಲ್ಲಿ ನಡೆದ ಈ ಅಪರೂಪದ ಕಾರ್ಯಕ್ರಮಕ್ಕೆ ಮಂಗಳೂರು ಸೆಂಟ್ರಲ್ ಎಸಿಪಿ ಭಾಸ್ಕರ್ ವಿ.ಬಿ ಚಾಲನೆ ನೀಡಿದರು.
ಕಾರ್ಯಕ್ರಮದ ಪ್ರಯುಕ್ತ ವಿದ್ಯಾರ್ಥಿಗಳು ಜ್ಯೋತಿ ಸರ್ಕಲ್ ನಿಂದ ಬಂಟ್ಸ್ ಹಾಸ್ಟೆಲ್ ಮೂಲಕ ರ್ಯಾಲಿ ಕೈಗೊಂಡು ಪಿವಿಎಸ್ ಬಳಿಯ ಪೊಲೀಸ್ ಆಯುಕ್ತರ ಕಚೇರಿ ಬಳಿ ಕೊನೆಗೊಳಿಸಿದರು.ಈ ಸಂದರ್ಭ ವಿದ್ಯಾರ್ಥಿಗಳು ಜ್ಯೋತಿ, ಬಂಟ್ಸ್ ಹಾಸ್ಟೆಲ್, ಪಿವಿಎಸ್, ಬಲ್ಮಠಗಳ ಟ್ರಾಫಿಕ್ ಸಿಗ್ನಲ್ ಗಳಲ್ಲಿ ನಿಯೋಜಿಸಲಾದ ಪೊಲೀಸರಿಗೆ ಗುಲಾಬಿಗಳನ್ನು ನೀಡಿ ಗೌರವಿಸಿದರು.
ಇದೇ ವೇಳೆ ಮಾತನಾಡಿದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಹನುಮಂತರಾಯ , "ಪ್ರೇಮಿಗಳ ದಿನದಂದು ಪೊಲೀಸರನ್ನು ಗೌರವಿಸುವ ಮತ್ತು ಪೊಲೀಸರ ಸೇವೆಯನ್ನು ಗುರುತಿಸುವ ಈ ಕಾರ್ಯಕ್ರಮ ವಿಶಿಷ್ಟ ಪರಿಕಲ್ಪನೆಯಾಗಿದೆ ’ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
’ರಿಯಲ್ ಸೂಪರ್ ಹೀರೋ ’ ಕಾರ್ಯಕ್ರಮದ ಮೂಲಕ, ಲೀ ಎಂಟರ್ಟೈನ್ಮೆಂಟ್ ಸಂಸ್ಥೆ ಹಾಗೂ ಅರೇನಾ ಆನಿಮೇಷನ್ ಆಯೋಜಿಸಿದ ಈ ವಿಶೇಷ ಕಾರ್ಯಕ್ರಮ ಪೊಲೀಸ್ ಇಲಾಖೆಗೆ ಸಮರ್ಪಿಸಲಾಗಿತ್ತು. ಪ್ರತಿ ವಿಶೇಷ ಆಚರಣೆಯ ಸಂದರ್ಭದಲ್ಲೂ ಪ್ರತಿಯೊಬ್ಬ ಪೊಲೀಸ್ ಕೂಡಾ ನಗರದ ಜನರನ್ನು ಸುರಕ್ಷಿತವಾಗಿಡಲು ಶ್ರಮಿಸಲು ಹಾಗೂ ಸಾಮುದಾಯಿಕವಾಗಿ ಸೇವೆ ಸಲ್ಲಿಸುವ ಪೊಲೀಸ್ ಇಲಾಖೆಯನ್ನು ಗೌರವಿಸಿವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಜನ ಸೇವೆಯನ್ನು ಮಾಡುವ ಪೊಲೀಸ್ ಇಲಾಖೆ ಜನರೊಂದಿಗಿದ್ದರೂ, ಅರಕ್ಷಕರು ಮಾತ್ರ ಸಾರ್ವಜನಿಕರಿಂದ ಸಾಕಷ್ಟು ಪ್ರೀತಿ ಮತ್ತು ಗೌರವವನ್ನು ಪಡೆಯುವುದಿಲ್ಲ ಇದಕ್ಕಾಗಿ ’ರಿಯಲ್ ಸೂಪರ್ ಹೀರೋ’ಎನ್ನುವ ವಿಶೇಷ ಕಾರ್ಯಕ್ರಮ ಮೂಲಕ ಪ್ರೀತಿಯ ಸಂಕೇತವಾದ ಗುಲಾಬಿಯನ್ನು ನಗರ ಪೊಲೀಸರಿಗೆ ನೀಡಿ , ವೆಲೆಂಟೈನ್ಸ್ ಡೇಯನ್ನು ವಿಶೇಷವಾಗಿ ಆಚರಿಸಿತು.
ಈ ಸಂದರ್ಭ ಅರೇನಾ ಅನಿಮೇಷನ್ ಸಂಸ್ಥೆಯ ವ್ಯವಸ್ಥಾಪಕ ಪ್ರಜ್ವಲ್ ಶೆಟ್ಟಿ, ಲೀ ಎಂಟರ್ಟೈಮೇಂಟ್ ನ ನಿರ್ದೇಶಕ ಸಂಜಯ್ ಪಾಟೀಲ್ ಉಪಸ್ಥಿತರಿದ್ದರು.