ಬೆಳ್ತಂಗಡಿ, ಅ 11 (DaijiworldNews/HR): ನಕ್ಸಲ್ ರಿಂದ ಕಾರು ಬೈಕ್ ಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಆರೋಪಿ ನಕ್ಸಲ್ ನಾಯಕ ಚಿನ್ನಿ ರಮೇಶ್ @ಶಿವಕುಮಾರನನ್ನು ಮಂಗಳೂರು ಜಿಲ್ಲಾ ನ್ಯಾಯಾಲಯ ದೋಷಮುಕ್ತಗೊಳಿಸಿ ಆದೇಶ ಮಾಡಿದೆ.
ಸಾಂದರ್ಭಿಕ ಚಿತ್ರ
9 ನವಂಬರ್ 2013 ರಂದು ಬೆಳಗಿನ ಜಾವ ಎರಡು ಗಂಟೆಗೆ ಬೆಳ್ತಂಗಡಿ ತಾಲೂಕು ಕುತ್ತೂರು ಗ್ರಾಮದ ಕುಕ್ಕುಜೆ ಕ್ರಾಸ್ ಎಂಬಲ್ಲಿ ರಾಮಚಂದ್ರ ಭಟ್ ಎಂಬುವರ ಮನೆ ಅಂಗಳಕ್ಕೆ ಮಾವೊವಾದಿ ಸಂಘಟನೆಗಳಲ್ಲಿ ತೊಡಗಿಸಿಕೊಂಡಿರುವ ಚಿನ್ನಿ ರಮೇಶ್ ಅಲಿಯಾಸ್ ರಮೇಶ್ ಅಲಿಯಾಸ್ ಶಿವಕುಮಾರ್ ಈತನು ಆರೋಪಿಗಳಾದ, ವಿಕ್ರಂ ಗೌಡ, ಸಾವಿತ್ರಿ, ಸುಂದರಿ ,ವಿಜಯ್, ಜಯಣ್ಣ ಮತ್ತು ಇತರರೊಂದಿಗೆ ಸೇರಿಕೊಂಡು ಪ್ರವೇಶ ಮಾಡಿ ದೂರುದಾರ ರಾಮಚಂದ್ರ ಭಟ್ ಇವರ ಮನೆಯ ಬಾಗಿಲನ್ನು ಬಡಿದು ಹೊರಗೆ ಕರೆದರು. ಅವರು ಮನೆಯಿಂದ ಹೊರಗಡೆ ಬಾರದೆ ಇದ್ದಾಗ ಅವರ ಮನೆಯ ಅಂಗಳದಲ್ಲಿ ಇದ್ದ ಮೋಟಾರು ಸೈಕಲ್ ಮತ್ತು ಮಾರುತಿ ಓಮಿನಿ ಕಾರಿಗೆ ಬೆಂಕಿ ಹಚ್ಚಿ ಸುತ್ತು ಹಾಕಿದ್ದಾರೆ ಮತ್ತು ಆ ಮೂಲಕ ದೂರುದಾರರಿಗೆ ಸುಮಾರು 2,69,555/ರಷ್ಟು ನಷ್ಟ ಉಂಟಾಗಿರುತ್ತದೆ ಎಂದು ದೊಷಾರೋಪಣಾ ಪಟ್ಟಿಯನ್ನು ಮಂಗಳೂರಿನ ಪ್ರಧಾನ ಜಿಲ್ಲಾ ನ್ಯಾಯಾಲಯದಲ್ಲಿ ಸಲ್ಲಿಸಲಾಗಿತ್ತು.
ಆರೋಪಿಗಳ ಮೇಲೆ ಈ ಕೆಳಗಿನ ಕಾಯ್ದೆಯ ಅಡಿಯಲ್ಲಿ ಆರೋಪ ಪಟ್ಟಿ ಸಲ್ಲಿಸಲಾಗಿತ್ತು. UAPA- ಸೆಕ್ಷನ್ 10(B), 13 Indian Arms Act section 3,25, IPC 143,147,148,447,435,427 ಜೊತೆಗೆ 149 ಆರಂಭಿಕವಾಗಿ ತನಿಖೆಯನ್ನು ಮಾಡಿರುವ ಬಂಟ್ವಾಳ ಡಿವೈಎಸ್ಪಿ ಯಾದ ರವೀಶ್ ಸಿಆರ್ ಇವರುಗಳು ಆರೋಪಿಗಳನ್ನು ಪತ್ತೆ ಮಾಡುವ ಸಾಧ್ಯತೆ ಕಡಿಮೆ ಇರುವುದರಿಂದ ಇದೊಂದು ಪತ್ತೆಯಾಗದ ಪ್ರಕರಣವೆಂದು ಪರಿಗಣಿಸಿ ಅಂತಿಮ ವರದಿಯನ್ನು ದಿನಾಂಕ 17-01-2017 ರಂದು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ವಿಚಾರಣೆ ಆರಂಭಿಸಿದ ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯ ಆರೋಪ ಪಟ್ಟಿಯಲ್ಲಿದ್ದ ಒಟ್ಟು 22 ಸಾಕ್ಷಿಗಳಲ್ಲಿ 9 ಸಾಕ್ಷಿಗಳನ್ನು ವಿಚಾರಣೆ ಮಾಡಿತು. ಅದರಲ್ಲಿ 5 ಮಂದಿ ಪ್ರತ್ಯಕ್ಷ ಸಾಕ್ಷಿಗಳಾಗಿದ್ದರು.2013 ರ ಸಮಯದಲ್ಲಿ ಕುತ್ತೂರು ಪ್ರದೇಶದಲ್ಲಿ ಅರಣ್ಯ ನಿವಾಸಿಗಳನ್ನು ಸರಕಾರ ಒಕ್ಕಲು ಎಬ್ಬಿಸುತ್ತಿತ್ತು.
ಈ ಸಂದರ್ಭ ದೂರುದಾರ ರಾಮಚಂದ್ರ ಭಟ್ ಅರಣ್ಯವಾಸಿಗಳನ್ನು ಒಕ್ಕಲು ಎಬ್ಬಿಸುವ ಕೆಲಸ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ನಕ್ಸಲರು ಈ ಕೃತ್ಯವನ್ನು ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ನಿನ್ನೆ ದಿನಾಂಕ 10-10-2022 ರಂದು ನ್ಯಾಯಾಲಯ ಅಂತಿಮ ನಿರ್ಣಯವನ್ನು ಪ್ರಕಟಿಸಿ ಆರೋಪಿ ಚಿನ್ನಿ ರಮೇಶ್ ನನ್ನು ದೋಷಮುಕ್ತಗೊಳಿಸಿದೆ.
ಚಿನ್ನಿ ರಮೇಶ್ ವಿರುದ್ಧ ಚಿಕ್ಕಮಗಳೂರಿನಲ್ಲಿ 4 ಕೇಸ್ ಗಳು ವಿಚಾರಣೆಯಲ್ಲಿ ಇದ್ದು ಪ್ರಸ್ತುತ ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ. ದೂರುದಾರ ರಾಮಚಂದ್ರ ಭಟ್ ಆತನ ಪತ್ನಿ ಹಾಗೂ ಇತರ ಸಾಕ್ಷಿಗಳು prosecution ಪರವಾಗಿ ಸಾಕ್ಷ್ಯ ನೀಡಿದ್ದರು. ಆರೋಪಿ ಚಿನ್ನಿ ರಮೇಶ್ @ ಶಿವಕುಮಾರ್ ಪರವಾಗಿ ಮಂಗಳೂರಿನ ನ್ಯಾಯವಾದಿ ದಿನೇಶ್ ಹೆಗ್ಡೆ ಉಳೆಪಾಡಿಯವರು ವಾದಿಸಿದರು.