ಉಡುಪಿ ಅ 11 (DaijiworldNews/MS): ಉಡುಪಿ ಜಿಲ್ಲೆಯ ಪ್ರಸಿದ್ದ ಪ್ರವಾಸಿ ತಾಣ ಪಡುಕೆರೆ ಬೀಚ್ ಗೆ ರಾತ್ರಿ 8 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಪ್ರವಾಸಿಗರಿಗೆ ಪ್ರವೇಶವನ್ನು ನಿಷೇಧಿಸಿ ಬೋರ್ಡ್ ಹಾಕಲಾಗಿದೆ. ಪಡುಕೆರೆಯ ಹಲವು ಭಾಗಗಳಲ್ಲಿ ಇಂತಹ ಬೋರ್ಡ್ ಗಳು ಕಂಡು ಬಂದಿದ್ದು ಪಡುಕೆರೆಯ ಸಾಂಸ್ಕ್ರತಿಕ ಪರಂಪರೆಯನ್ನು ಉಳಿಸುವ ದೃಷ್ಟಿಯಿಂದ ಈ ನಿರ್ಣಯವನ್ನು ಸ್ವೀಕರಿಸಲಾಗಿದೆ ಎಂದು ಬರೆಯಲಾಗಿದೆ.
ಸರ್ವ ಸಂಸ್ಥೆಗಳ ಒಕ್ಕೂಟ ಪಡುಕೆರೆ ವತಿಯಿಂದ ಈ ಬೋರ್ಡ್ ಗಳನ್ನು ಹಾಕಲಾಗಿದೆ. “ಮಟ್ಟುವಿನಿಂದ ಶಾಂತಿನಗರದವರೆಗೆ ರಾತ್ರಿ ಗಂಟೆ 8 ರಿಂದ ಬೆಳಿಗ್ಗೆ 6 ರ ತನಕ ಯಾವುದೇ ಪ್ರವಾಸಿಗರು ಊರಿನಲ್ಲಿ ತಿರುಗಾಡುವುದು, ಬೀಚ್ ನಲ್ಲಿ ಕೂರೂವುದು ಕಡಾಯವಾಗಿ ನಿಷೇಧಿಸಲಾಗಿದೆ” ಎಂದು ಬೋರ್ಡ್ ನಲ್ಲಿ ಬರೆಯಲಾಗಿದ್ದು ಮಾತ್ರವಲ್ಲದೇ “ಈ ನಿಯಮವನ್ನು ಉಲ್ಲಂಘಿಸಿದ್ದಲ್ಲಿ ಮುಂದಾಗುವ ಯಾವುದೇ ಪ್ರತಿಕ್ರಿಯೆಗಳಿಗೆ ಊರಿನವರು ಹೊಣೆಯಾಗಿರುವುದಿಲ್ಲ” ಎಂಬ ಎಚ್ಚರಿಕೆಯನ್ನೂ ಬರೆಯಲಾಗಿದೆ.
ಎರಡು ವರ್ಷದ ಹಿಂದೆ ಪಡುಕೆರೆ ಸಮುದ್ರ ತೀರದಲ್ಲಿ ಬಯೊಲುಮಿನೆಸೆನ್ಸ್ ಪರಿಣಾದಿಂದಾಗಿ ರಾತ್ರಿ ಸಮಯದಲ್ಲಿ ಸಮುದ್ರ ನೀಲಿಯಾಗಿ ಗೋಚರಿಸುತ್ತಿತ್ತು. ಇದನ್ನು ವೀಕ್ಷಿಸಲು ನೂರಾರು ಮಂದಿ ಪ್ರವಾಸಿಗರು ರಾತ್ರಿ ಸಮಯದಲ್ಲಿ ಆಗಮಿಸುತಿದ್ದರು. ಇದಾದ ಬಳಿಕ ಪಡುಕೆರೆಗೆ ಬರುವ ಪ್ರವಾಸಿಗಳ ಸಂಖ್ಯೆ ಹೆಚ್ಚಾಗಿದ್ದು, ರಾತ್ರಿ ಸಮಯದಲ್ಲಿ ಯುವಕ ಯುವತಿಯರು ಮದ್ಯಪಾನ, ಮತ್ತು ಇನ್ನಿತರ ಅನೈತಿಕ ಚಟುವಟಿಕೆಗಳಲ್ಲಿ ನಿರತರಾಗಿರುವುದು ಕಂಡು ಬಂದಿತ್ತು.