ಮಂಗಳೂರು, ಅ 10 (DaijiworldNews/HR): ತುಳು ಭಾಷೆಗೆ ರಾಜ್ಯ ಸರಕಾರ ಸೂಕ್ತ ಮಾನ್ಯತೆ ನೀಡಬೇಕು ಎಂದು ಒತ್ತಾಯಿಸಿ ಅಪ್ಪೆ ಬಾಸೆ ಪೊರ್ಂಬಾಟ ಕೂಟ, ತುಳುನಾಡ್ ವತಿಯಿಂದ ಪ್ರತಿಭಟನೆ ನಡೆಸಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ತುಳು ರಂಗಭೂಮಿ ಮತ್ತು ಚಲನಚಿತ್ರ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ಬೈಲ್, ತುಳು ಭಾಷೆಗೆ ಸರಿಯಾದ ಮನ್ನಣೆ ಸಿಗದಿರುವುದು ನಿಜಕ್ಕೂ ದುರಂತ, ನಮ್ಮ ರಾಜಕೀಯ ಪ್ರತಿನಿಧಿಗಳು ಭಾಷೆಯನ್ನು ಭಾರತ ಸಂವಿಧಾನದ ಎಂಟನೇ ಪರಿಚ್ಚೆದಕ್ಕೆ ಸೇರಿಸುವಲ್ಲಿ ವಿಫಲರಾಗಿದ್ದಾರೆ. ವಿವಿಧ ಸಂಘಟನೆಗಳು ತುಳು ಭಾಷೆಗಾಗಿ ಶ್ರಮಿಸಿ ಒಂದಾಗಬೇಕು, ಭಾಷೆಗೆ ಸರಿಯಾದ ಮನ್ನಣೆ ಸಿಗದ ಕಾರಣ ತುಳು ಸಿನಿಮಾಗಳು ಕೂಡ ಹಲವಾರು ಅವಕಾಶಗಳನ್ನು ಕಳೆದುಕೊಳ್ಳುತ್ತಿವೆ, ತುಳು ಭಾಷಿಗರು ಸಮುದಾಯ ಮತ್ತು ಜಾತಿಯನ್ನು ಲೆಕ್ಕಿಸದೆ ಭಾಷೆಯನ್ನು ಬೆಂಬಲಿಸಲು ಮುಂದಾಗಬೇಕು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನೀಲ್ಕುಮಾರ್ ಮತ್ತು ಇತರ ಪ್ರತಿನಿಧಿಗಳನ್ನು ತರಾಟೆಗೆ ತೆಗೆದುಕೊಂಡ ಅವರು, ಕನ್ನಡ ಭಾಷೆಯಲ್ಲಿಯೇ ಸಾರ್ವಜನಿಕರಿಂದ ಮತ ಕೇಳಲಿ ಎಂದು ಸವಾಲು ಹಾಕಿದ್ದಾರೆ.
ಇನ್ನು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ಸಾರ್ ಅವರನ್ನು ತರಾಟೆಗೆ ತೆಗೆದುಕೊಂಡ ಅವರು, ನಮ್ಮ ಭಾಷೆಯನ್ನು ಗೌರವಿಸಿ ದಯಾನಂದ ಕತ್ತಲ್ಸಾರ್ ಅವರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ಅತ್ಯಗತ್ಯವಾಗಿತ್ತು. ಕನಿಷ್ಠ ಪಕ್ಷ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಇಲ್ಲಿ ಹಾಜರಿರಬೇಕಿತ್ತು ಎಂದಿದ್ದಾರೆ.
ತುಳು ರಂಗಭೂಮಿ ನಿರ್ದೇಶಕ ಹಾಗೂ ಚಲನಚಿತ್ರ ನಿರ್ಮಾಪಕ ದೇವದಾಸ್ ಕಾಪಿಕಾಡ್ ಮಾತನಾಡಿ, ತುಳುನಾಡಿನ ಜನರು ಜಗತ್ತಿನಾದ್ಯಂತ ಇದ್ದಾರೆ, ಅವರು ಆರ್ಥಿಕವಾಗಿ, ಶಿಕ್ಷಣದಲ್ಲಿ ಮತ್ತು ಇತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ, ಭಾರತೀಯ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ತುಳು ಭಾಷೆಯನ್ನು ಸೇರಿಸುವುದು ಬಹಳ ಹಿಂದೆಯೇ ಆಗಬೇಕಿತ್ತು ಎಂದರು.
ತುಳು ಸಾಹಿತ್ಯ ಅಕಾಡೆಮಿಯ ಬಾಗಿಲು ಮುಚ್ಚಬೇಕು, ತುಳು ಭಾಷೆಯನ್ನು ಉಳಿಸಲು ಯಾವುದೇ ಪ್ರಯತ್ನ ಮಾಡುತ್ತಿಲ್ಲ ಎಂದು ದಕ್ಷಿಣ ಕನ್ನಡ ಬಸ್ ಆಪರೇಟರ್ಸ್ ಅಸೋಸಿಯೇಶನ್ ಅಧ್ಯಕ್ಷ ದಿಲ್ರಾಜ್ ಆಳ್ವ ಹೇಳಿದ್ದಾರೆ.
ಅಕ್ಟೋಬರ್ 25 ರೊಳಗೆ ತುಳು ಭಾಷೆಗೆ ಸರಕಾರ ಸೂಕ್ತ ಮನ್ನಣೆ ನೀಡಬೇಕು, ಇಲ್ಲದಿದ್ದಲ್ಲಿ ತುಳುನಾಡಿನ ಸಾರ್ವಜನಿಕರು ನವೆಂಬರ್ನಲ್ಲಿ ಬಂದ್ಗೆ ಕರೆ ನೀಡುವುದಾಗಿ ಅಪ್ಪೆ ಬಾಸೆ ಪೊರ್ಂಬಾಟ ಕೂಟದ ಸಂಚಾಲಕ ಸುದರ್ಶನ್ ಸುರತ್ಕಲ್ ಆಗ್ರಹಿಸಿದ್ದಾರೆ.
ಈ ವೇಳೆ ವಿವಿಧ ತುಳು ಸಂಘಟನೆಗಳು ಮತ್ತು ತುಳು ಚಿತ್ರರಂಗದ ನಟರು ಉಪಸ್ಥಿತರಿದ್ದರು.