ಬೆಳ್ತಂಗಡಿ, ಅ 10 (DaijiworldNews/HR): ಇಂದಬೆಟ್ಟು ಗ್ರಾಮದ ಶಾಂತಿನಗರ ಎಂಬಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪಿ ನಾರಾಯಣ ನಾಯ್ಕ ಎಂಬವನ ಸಹೋದರ ಜಾರಪ್ಪ ನಾಯ್ಕರವರ ಸಾವಿಗೆ ಕಾರಣವಾಗಿದ್ದಾನೆ ಎಂದು ಸಂತ್ರಸ್ತೆಯ ತಂದೆ ಹರಿಪ್ರಸಾದ್ ಪೂಜಾರಿ ವಿರುದ್ಧ ದೂರು ದಾಖಲಾಗಿ ಆತನನ್ನು ಬಂಧಿಸಲಾಗಿತ್ತು. ಇದೀಗ ಸಂತ್ರಸ್ತ ಬಾಲಕಿಯ ತಂದೆ ಹರಿಪ್ರಸಾದ್ ಪೂಜಾರಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಸಾಂದರ್ಭಿಕ ಚಿತ್ರ
6 ವರ್ಷ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿ ನಾರಾಯಣ ನಾಯ್ಕನಿಗೆ ಹಲ್ಲೆ ನಡೆಸಿ ಆತನ ಅಣ್ಣ ಜಾರಪ್ಪ ನಾಯ್ಕರವರ ಸಾವಿಗೆ ಆರೋಪಿ ಹರಿಪ್ರಸಾದ್ ಪೂಜಾರಿ, ಚಂದ್ರಕಾಂತ, ಮನೋಹರ, ದೀಪಕ್ ಕಾರಣರಾಗಿದ್ದಾರೆ ಮತ್ತು ದಲಿತರಾದ ತನ್ನ ತಂದೆ ಜಾರಪ್ಪ ನಾಯ್ಕರ ವಿರುದ್ಧ ದಲಿತ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಮೃತ ಜಾರಪ್ಪ ನಾಯ್ಕರ ಮಗ ರಾಜಶೇಖರರವರು ನೀಡಿದ ದೂರಿನ ಮೇರೆಗೆ ಪೊಲೀಸರು ಆರೋಪಿಗಳ ವಿರುದ್ಧ ಐ.ಪಿ.ಸಿ ಕಲಂ 304, 326,504,506, 509 ಜೊತೆಗೆ 34 ಮತ್ತು ಎಸ್. ಸಿ ಎಸ್. ಟಿ ಕಾಯ್ದೆಯ ಕಲಂ 3(2)(ವಿ) ಮತ್ತು 3(2)(ವಿ ಎ) ಅಡಿ ಪ್ರಕರಣ ದಾಖಲಿಸಿದ್ದರು. ಈ ಮಧ್ಯೆ ಜಾರಪ್ಪ ನಾಯ್ಕ ರವರು ಮೆದುಳಿನ ರಕ್ತಸ್ರಾವದಿಂದ ಮೃತಪಟ್ಟಿರುವುದಾಗಿ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ತನಿಖಾಧಿಕಾರಿಗಳಿಗೆ ವರದಿ ನೀಡಿದ್ದರು.
ಪ್ರಕರಣ ದಲಿತ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಬರುವುದಿಲ್ಲ ಮತ್ತು ಮೃತ ಜಾರಪ್ಪ ನಾಯ್ಕರವರು ಮೆದುಳಿನ ರಕ್ತಸ್ರವದಿಂದ ಮರಣ ಹೊಂದಿರುತ್ತಾರೆ ಎಂಬ ವಿಚಾರಗಳನ್ನು ಪರಿಗಣಿಸಿ ಮಾನ್ಯ ನ್ಯಾಯಲಯವು ಆರೋಪಿ ಸಂತ್ರಸ್ತ ಬಾಲಕಿಯ ತಂದೆ ಹರಿಪ್ರಸಾದ್ ಪೂಜಾರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಆರೋಪಿ ಪರವಾಗಿ ಹೈಕೋರ್ಟ್ ನ್ಯಾಯವಾದಿ ಕೇತನ್ ಬಂಗೇರ ಬೋಳಂತೂರು ವಾದಿಸಿದ್ದರು.