ಕೋಟ,ಫೆ 14(MSP): ಇತ್ತೀಚಿಗೆ ಕೋಟ ಮಣೂರಿನ ಚಿಕ್ಕಿನಕೆರೆ ಸಮೀಪ ಲೋಹಿತ್ ಪೂಜಾರಿಯ ಮನೆಯಂಗಳದಲ್ಲಿ ರೌಡಿ ಶೀಟರ್ ರಾಜಶೇಖರ ರೆಡ್ಡಿ ಮತ್ತು ಆತನ ತಂಡದವರಿಂದ ಕೊಲೆಯಾದ ಯತೀಶ್ ಕಾಂಚನ್ ಹಾಗೂ ಭರತ್ ಶ್ರೀಯಾನ್ರ ಹತ್ಯೆಗೈದವರಿಗೆ ಕಠಿಣ ಶಿಕ್ಷೆಕೋರಿ ಶ್ರೀಕ್ಷೇತ್ರ ಕೋಟ ಅಮೃತೇಶ್ವರಿ ಹಲವು ಮಕ್ಕಳ ತಾಯಿ ಹಾಗೂ ಶ್ರೀ ಕ್ಷೇತ್ರ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಸಂಕ್ರಾತಿ ದಿನದ ಅಂಗವಾಗಿ ಸಾಮೂಹಿಕ ಪ್ರಾರ್ಥನೆ ಹಾಗೂ ಹುಯಿಲು ಸೇವೆಯನ್ನು ಕೋಟದ ನಾಗರೀಕರು ಸೇರಿದಂತೆ ಇರ್ವರ ಮೃತ ಕುಟುಂಬಿಕರು ನೀಡಿದ್ದಾರೆ.
ಬುಧವಾರ ಪೂರ್ವಾಹ್ನ ಕೋಟದ ಅಮೃತೇಶ್ವರಿ ದೇವಳದಲ್ಲಿ ದರ್ಶನ ಸೇವೆ ಇರುವುದರಿಂದ ಶ್ರೀ ದೇವಳದಲ್ಲಿ ಕೋಟ ಸೇರಿದಂತೆ ವಿವಿಧ ಕಡೆಗಳಿಂದ ಆಗಮಿಸಿದ ಭಕ್ತ ಸಮೂಹ ಸಾಮೂಹಿಕ ಪ್ರಾರ್ಥನೆಗೆ ಅಣಿಯಾದರು. ಅದಾದ ನಂತರ ದರ್ಶನ ಸೇವೆ ಪ್ರಾರಂಭವಾಗುತ್ತಿದ್ದಂತೆ ಶ್ರೀ ದೇವಳದಲ್ಲಿ ಭರತ್ ಹಾಗೂ ಯತೀಶ್ ಮನೆಯವರ ಕಣ್ಣಿರ ಕೊಡಿ ಹರಿಯುತ್ತಿತ್ತು.
ಪ್ರತಿಭಟನೆಯಲ್ಲಿ ಪ್ರಾರ್ಥನೆ ಹುಯಿಲು ಸೇವೆ
ಕಳೆದ ಹಲವು ದಿನಗಳ ಹಿಂದೆ ಇದೇ ವಿಚಾರವಾಗಿ ಕೋಟ ಬಸ್ಸ್ ನಿಲ್ದಾಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರತಿಭಟನಾ ನಿರತರು ಸಾಮೂಹಿಕ ಪ್ರಾರ್ಥನೆ ಹಾಗೂ ಸಂಕ್ರಾತಿ ದಿನದಂದು ಹುಯಿಲು ಸೇವೆ ನೀಡುವುದಾಗಿ ಘೋಷಿಸಿದರು ಅದರಂತೆ ಬುಧವಾರ ಶ್ರೀ ದೇವಳದಲ್ಲಿ ಸಾಮೂಹಿಕ ಪ್ರಾರ್ಥನೆ ಹುಯಿಲು ಸೇವೆ ನಡೆಯಿತು.
ದೇವರ ದರ್ಶನ ನುಡಿ
ಕೋಟದ ನಾಗರೀಕರು ಸೇರಿದಂತೆ ಹತ್ಯೆಯಾದ ಕುಟುಂಬಿಕರು ದೇವರಲ್ಲಿ ಪ್ರಾರ್ಥಿಸಿ ನಿನ್ನ ಸನ್ನಿಧಾನದಲ್ಲಿ ಈ ರೀತಿಯ ಎರಡು ಕೊಲೆಗಳಾಗಿವೆ ಇಂಥಹ ಕೃತ್ಯಗಳಿಗೆ ನಿನ್ನ ಸಾನಿಧ್ಯದಲ್ಲಿ ಎಡೆ ಉಂಟೆ ಎಂದು ಕೇಳಿದಾಕ್ಷಣ ಶ್ರೀ ದೇವರ ನುಡಿಯಂತೆ ನನ್ನ ಸನ್ನಿಧಾನದಲ್ಲಿ ಈ ರೀತಿಯ ಕೃತ್ಯ ಎಸಗಿದ ರಾಕ್ಷಸರಿಗೆ ಖಂಡಿತವಾಗಿಯೂ ಬಿಡಲಾರೆ ತನ್ನ ಮಖದ ಛಾಯೇಗೆ ರಕ್ತದೋಕುಳಿ ಹರಿಸಿದವರ ಮಗ್ಗಲು ಮುರಿಯಲು ಈ ಹಂತದಲ್ಲೆ ಗಣಗಳನ್ನು ಬಿಟ್ಟಿದ್ದೇನೆ ಇದಕ್ಕೆಲ್ಲ ನ್ಯಾಯ ದೊರಕಿಸುತ್ತೇನೆ ಎಂದು ನುಡಿಯಿತ್ತಿತು. ಮಾರಣಕಟ್ಟೆಯ ಬ್ರಹ್ಮಲಿಂಗೇಶ್ವರನಲ್ಲೂ ಇದೇ ರೀತಿ ದೇವರಲ್ಲಿ ಮನವಿ ಮಾಡಲಾಯಿತು. ಈ ಸಂದರ್ಭದಲ್ಲಿ ಊರಿನ ಹಲವು ಗ್ರಾಮಸ್ಥರು ಉಪಸ್ಥಿತರಿದ್ದರು.