ಮಂಗಳೂರು, ಅ 09 (DaijiworldNews/DB) ಸುರತ್ಕಲ್ ಸರ್ಕಲ್ ಹೆಸರಿಡೋ ವಿಚಾರದಲ್ಲಿ ಮುಸ್ಲಿಮರು ಅಚ್ಚರಿ ನಡೆ ಇಟ್ಟಿದ್ದಾರೆ. ವೀರ ಸಾವರ್ಕರ್ ಹೆಸರಿಗೆ ಆಕ್ಷೇಪ ವ್ಯಕ್ತಪಡಿಸಿವ ಮುಸ್ಲಿಮರು ಸಾವರ್ಕರ್ ಹೆಸರಿನ ಬದಲು ಬೇರೆ ಹೆಸರಿಡುವಂತೆ ಮನವಿ ಮಾಡಿದ್ದಾರೆ.
ಮಂಗಳೂರು ಉತ್ತರ ಬಿಜೆಪಿ ಶಾಸಕ ಭರತ್ ಶೆಟ್ಟಿಗೆ ಮುಸ್ಲಿಂ ಐಕ್ಯತಾ ವೇದಿಕೆ ವಿಶೇಷ ಮನವಿ ಮಾಡಿದ್ದು, ಸುರತ್ಕಲ್ ವೃತ್ತಕ್ಕೆ ವೀರ ಸಾವರ್ಕರ್ ಹೆಸರಿನ ಬದಲು ಕೋಟಿ ಚೆನ್ನಯ್ಯ ಹೆಸರಿಡಿ ಎಂದು ಮಂಗಳೂರು ಮಹಾನಗರ ಪಾಲಿಕೆ ಕಮಿಷನರ್ ಮತ್ತು ಮೇಯರ್ ಗೆ ಮನವಿ ಸಲ್ಲಿಸಿದೆ.
ತುಳುನಾಡಿನ ದೈವಿಕ ಶಕ್ತಿಗಳಾದ ಕೋಟಿ ಚೆನ್ನಯರ ಹೆಸರಿಡಲು ಮುಸ್ಲಿಮರು ಈ ಮೂಲಕ ಮನವಿ ಮಾಡಿದ್ದಾರೆ. ಕೋಟಿ ಚೆನ್ನಯ್ಯರ ಹೆಸರಿನ ಜೊತೆ ಶ್ರೀನಿವಾಸ ಮಲ್ಯ ಮತ್ತು ಎಂ.ಲೋಕಯ್ಯ ಶೆಟ್ಟಿ ಹೆಸರನ್ನು ಕೂಡಾ ಅವರು ಪ್ರಸ್ತಾಪ ಮಾಡಿದ್ದಾರೆ. ಅಲ್ಲದೇ ನವ ಮಂಗಳೂರು ನಿರ್ಮಾತೃ ಶ್ರೀನಿವಾಸ ಮಲ್ಯ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಎಂ.ಲೋಕಯ್ಯ ಶೆಟ್ಟಿ ಹೆಸರನ್ನು ಕೂಡಾ ಇಡಬೇಕೆಂದು ಒತ್ತಾಯಿಸಿದ್ದಾರೆ.
ಸದ್ಯ ಮಂಗಳೂರು ಮಹಾನಗರ ಪಾಲಿಕೆ ಸಭೆಯಲ್ಲೂ ಶಾಸಕ ಭರತ್ ಶೆಟ್ಟಿ ಪ್ರಸ್ತಾಪ ಪಾಸ್ ಆಗಿದ್ದು ಹೀಗಾಗಿ ಸುರತ್ಕಲ್ ಗೆ ಸಾವರ್ಕರ್ ಹೆಸರಿಡಲು ನಿರ್ಧರಿಸಲಾಗಿದೆ. ಸದ್ಯ ಪಾಲಿಕೆಯು ಸಾರ್ವಜನಿಕ ಆಕ್ಷೇಪಣೆ ಮತ್ತು ಸಲಹೆ ಪಡೆಯಲು ಮುಂದಾಗಿದೆ.
ಈ ಮಧ್ಯೆಯೇ ಮತ್ತೆ ಮೂರು ಹೆಸರು ಸೂಚಿಸಿ ಮುಸ್ಲಿಂ ಸಂಘಟನೆ ಶಾಸಕರ ಪ್ರಸ್ತಾಪಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. ಹೀಗಾಗಿ ಮಂಗಳೂರು ಪಾಲಿಕೆಗೆ ಸುರತ್ಕಲ್ ಸರ್ಕಲ್ ನಾಮಕರಣ ವಿವಾದ ಮತ್ತೆ ತಲೆ ನೋವಾಗಿದೆ. ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸೋ ಮುನ್ನವೇ ಮುಸ್ಲಿಮರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯಾವುದೇ ಮುಸ್ಲಿಂ ಹೆಸರು ಸೂಚಿಸದೇ ಮುಸ್ಲಿಂ ಸಂಘಟನೆಗಳು ಈ ಮೂಲಕ ಅಚ್ಚರಿ ನಡೆ ಇಟ್ಟಿವೆ. ವಿವಾದಿತ ವ್ಯಕ್ತಿಗಳ ಹೆಸರಿಟ್ಟರೆ ಕೋಮು ಸೌಹಾರ್ದ ಹಾಳಾಗುವ ಸಾಧ್ಯತೆ ಅಂತ ಮನವಿಯಲ್ಲಿ ಉಲ್ಲೇಖಿಸಲಾಗಿದೆ.