ಉಳ್ಳಾಲ, ಅ 09 (DaijiworldNews/DB)ಕೆಲವು ದಿನಗಳಿಂದ ನಾಪತ್ತೆಯಾಗಿ ಚೆಂಬುಗುಡ್ಡೆಯ ಯುವಕನ ಶವ ಮಂಜೇಶ್ವರ ಸಮುದ್ರದಲ್ಲಿ ಪತ್ತೆಯಾಗಿದ್ದು, ಇದೊಂದು ಕೊಲೆ ಎನ್ನುವ ಶಂಕೆ ಕುಟುಂಬಸ್ಥರು ವ್ಯಕ್ತಪಡಿಸಿದ್ದಾರೆ.
ತೊಕ್ಕೊಟ್ಟು ಸಮೀಪದ ಚೆಂಬುಗುಡ್ಡೆ ನಿವಾಸಿ ಝಾಕಿರ್(೩೬) ಎಂಬವರೇ ಮೃತ ದುರ್ದೈವಿ. ಮೀನು ವ್ಯಾಪಾರಿಯಾಗಿದ್ದ ಇವರಿಗೆ ಪತ್ನಿ, ಏಳು ವರ್ಷದ ಮಗ ಇದ್ದು, ಪತ್ನಿ ಏಳು ತಿಂಗಳ ಗರ್ಭಿಣಿ ಎಂದು ತಿಳಿದುಬಂದಿದೆ.
ಶಾಂತ ಸ್ವಭಾವದ ಮೂಲಕ ಪರಿಸರದಲ್ಲಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದ ಇವರು, ಕಳೆದ ತಿಂಗಳು ೨೬ರಂದು ತೊಕ್ಕೊಟ್ಟಿಗೆ ಹೋಗಿ ಬರುವುದಾಗಿ ಮನೆಯಿಂದ ಹೋಗಿದ್ದು, ನಂತರ ಹಿಂದಿರುಗಿ ಬಂದಿರಲಿಲ್ಲ. ಮೊಬೈಲ್ ರಿಂಗ್ ಆಗಿ ಸ್ವಿಚ್ಛ್ ಆಫ್ ಆಗುತ್ತಿತ್ತು ಎನ್ನಲಾಗಿದೆ.
ಹತ್ತು ದಿನಗಳಾದರೂ ಸಂಪರ್ಕಕ್ಕೆ ಸಿಗದ ಕಾರಣ ಎರಡು ದಿನಗಳ ಯುವಕನ ಫೊಟೋ ಮತ್ತು ವಿವರವನ್ನು ಜಾಲತಾಣದಲ್ಲಿ ಹರಿಯಬಿಡಲಾಗಿತ್ತು. ಅವರು ಧರಿಸಿದ್ದ ಬಟ್ಟೆ, ಬೆಲ್ಟ್ ಗುರುತಿನ ಮೇರೆಗೆ ವಾರದ ಹಿಂದೆಯೇ ಮಂಜೇಶ್ವರ ಸಮುದ್ರದಲ್ಲಿ ಶವ ಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭಿಸಿದೆ. ಅಪರಿಚಿತ ಶವವಾಗಿದ್ದ ಕಾರಣ ಮಂಗಲ್ಪಾಡಿ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ಕೆಲವು ದಿನ ಇಡಲಾಗಿದ್ದು, ಪೋಷಕರು ಬಾರದ ಹಿನ್ನೆಲೆಯಲ್ಲಿ ಸಮೀಪದ ಮಸೀದಿಯಲ್ಲಿ ದಫನ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಯುವಕ ಹೋಗಿದ್ದ ಬೈಕ್ ಸೋಮೇಶ್ವದಲ್ಲಿ ಪತ್ತೆಯಾಗಿದ್ದು, ಒಬ್ಬನೇ ಹೋಗಿರುವುದು ಸಿಸಿ ಕೆಮರಾಗಳಲ್ಲಿ ಕಂಡು ಬಂದಿದೆ. ಇವರು ಸ್ಥಿತಿವಂತರಾಗಿರುವುದರಿಂದ ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆ ಇಲ್ಲ, ಇದೊಂದು ಕೊಲೆಯಾಗಿದೆ. ಮೃತದೇಹದಲ್ಲಿ ಗಾಯದ ಗುರುತುಗಳು ಪತ್ತೆಯಾಗಿವೆ. ಆತನ ಮೊಬೈಲ್ ಲೋಕೇಶನ್ ಸೋಮೇಶ್ವರ ಹಾಗೂ ಮೊನ್ನೆ ಸಂಜೆ ೬:೧೫ರವರೆಗೆ ಪಂಡಿತೌಸ್ ತೋರಿಸಿ ನಂತರ ಸ್ವಿಚ್ಛ್ ಆಫ್ ಆಗಿದೆ. ಈ ಮೊಬೈಲ್ ಯಾರಲ್ಲಿದೆ ಎನ್ನುವುದು ಗೊತ್ತಾದರೆ ಸಾವಿಗೆ ಕಾರಣವೂ ಗೊತ್ತಾಗಲಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಉಳ್ಳಾಲ ಠಾಣಾಧಿಕಾರಿಯಲ್ಲಿ ಮನವಿ ಮಾಡಿದ್ದು, ಸಿಸಿ ಕೆಮರಾ ಫೂಟೇಜ್ಗಳನ್ನೂ ನೀಡಲಾಗಿದೆ. ಮೃತದೇಹವನ್ನು ಚೆಂಬುಗುಡ್ಡೆಗೆ ತಂದು ಮರು ದಫನ ಮಾಡಲಾಗುವುದು ಎಂದು ಎಂದು ಸಹೋದರ ಅಶ್ರಫ್ ಹರೇಕಳ ತಿಳಿಸಿದ್ದಾರೆ.