ಬಂಟ್ವಾಳ, ಅ 09 (DaijiworldNews/DB): ರಾಜ್ಯದ ಪರಿಶಿಷ್ಟರ ಜೀವನ ಮಟ್ಟ ಸುಧಾರಣೆಯ ದೃಷ್ಟಿಯಿಂದ ರಾಜ್ಯ ಸರ್ಕಾರವು ಎಸ್.ಟಿ. ಸಮುದಾಯ ಮೀಸಲಾತಿಯನ್ನು ಶೇ. 3ರಿಂದ ಶೇ. 7ಕ್ಕೆ ಹೆಚ್ಚಿಸುವ ಮೂಲಕ ಸಮುದಾಯಕ್ಕೆ ದೊಡ್ಡ ಮಟ್ಟದ ಕೊಡುಗೆ ನೀಡಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದ್ದಾರೆ.
ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಸಭಾಂಗಣದಲ್ಲಿ ಬಂಟ್ವಾಳ ಬಿಜೆಪಿ ಎಸ್.ಟಿ. ಮೋರ್ಚಾದ ವತಿಯಿಂದ ಮಹರ್ಷಿ ವಾಲ್ಮೀಕಿ ಜಯಂತಿಯ ಅಂಗವಾಗಿ ದೇರಳಕಟ್ಟೆ ಯೇನಪೋಯ ವೈದ್ಯಕೀಯ ವಿವಿಯ ಸಹಯೋಗದೊಂದಿಗೆ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಅವರು ಉದ್ಘಾಟಿಸಿದರು.
ಮೀಸಲಾತಿ ಹೆಚ್ಚಳದ ದೃಷ್ಟಿಯಿಂದ ಪಕ್ಷದ ಕಾರ್ಯಕಾರಿಣಿಯಲ್ಲೂ ಪ್ರಸ್ತಾಪಗೊಂಡಿದ್ದು, ವಾಲ್ಮೀಕಿ ಜಯಂತಿಯ ಶುಭ ಸಂದರ್ಭದಲ್ಲಿ ಕ್ಯಾಬಿನೆಟ್ ನ ಒಪ್ಪಿಗೆಯನ್ನು ಪಡೆದು ಮೀಸಲಾತಿ ಹೆಚ್ಚಳದ ಮಹತ್ವದ ತೀರ್ಮಾನ ಪ್ರಕಟಗೊಂಡಿದೆ. ಪರಿಶಿಷ್ಟರ ಆರೋಗ್ಯದ ದೃಷ್ಟಿಯಿಂದ ಸರ್ಕಾರ ವಿಶೇಷ ಗಮನಹರಿಸಿ ಅದರ ಜತೆಗೆ ಇತರ ಸಮುದಾಯದವರ ಆರೋಗ್ಯದ ದೃಷ್ಟಿಯಿಂದ ಖಾಸಗಿ ಕ್ಷೇತ್ರದಲ್ಲಿ ದುಬಾರಿಯಾಗುವ ಆರೋಗ್ಯ ತಪಾಸಣೆಗಳನ್ನು ಯೇನಪೋಯ ವಿವಿಯ ಸಹಯೋಗದೊಂದಿಗೆ ಮಾಡುತ್ತಿದ್ದು, ಚಿಕಿತ್ಸೆಗೂ ನೆರವು ನಿಡುತ್ತಿದೆ ಎಂದರು.
ಎಸ್.ಟಿ.ಮೋರ್ಚಾ ಅಧ್ಯಕ್ಷ ರಾಮ ನಾಯ್ಕ್ ಕೆ. ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ ಅವರು ಮಹರ್ಷಿ ವಾಲ್ಮೀಕಿ ಕುರಿತು ಉಪನ್ಯಾಸ ನೀಡಿದರು.
ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಮೋರ್ಚಾದ ಪ್ರಭಾರಿ ರಮನಾಥ ರಾಯಿ, ಬಾಳ್ತಿಲ ಗ್ರಾ.ಪಂ.ಅಧ್ಯಕ್ಷೆ ಹಿರಣ್ಮಯಿ, ಬರಿಮಾರು ಗ್ರಾ.ಪಂ.ಅಧ್ಯಕ್ಷೆ ಶಶಿಕಲಾ, ಗೋಳ್ತಮಜಲು ಗ್ರಾ.ಪಂ.ಅಧ್ಯಕ್ಷ ಅಭಿಷೇಕ್ ಶೆಟ್ಟಿ, ದೇರಳಕಟ್ಟೆ ಯೇನಪೋಯ ಆಸ್ಪತ್ರೆಯ ವೈದ್ಯೆ ಡಾ. ಅಶ್ವಿನಿ ಶೆಟ್ಟಿ ಉಪಸ್ಥಿತರಿದ್ದರು.
ಬರಿಮಾರು ಗ್ರಾ.ಪಂ.ಸದಸ್ಯೆ ಪುಷ್ಲಲತಾ ಸ್ವಾಗತಿಸಿದರು. ಬಾಳ್ತಿಲ ಗ್ರಾ.ಪಂ.ಸದಸ್ಯ ವಿಠಲ್ ನಾಯ್ಕ್ ಕಾರ್ಯಕ್ರಮ ನಿರ್ವಹಿಸಿದರು.