ಮಂಗಳೂರು,ಫೆ 14(MSP): ತೆರಿಗೆ ತಪ್ಪಿಸಿ ಅಕ್ರಮವಾಗಿ ಅಡಕೆ ಆಮದಾಗುತ್ತಿರುವುದು ಮುಂದುವರಿದೆ. ಕಳಪೆ ಗುಣಮಟ್ಟದ ಮಯನ್ಮಾರ್ ಅಡಕೆ ಈಗ ಮಂಗಳೂರು ಮಾರುಕಟ್ಟೆಗೂ ನುಸುಳಿದೆ. ಅಡಕೆ ಮಾರುಕಟ್ಟೆ ಮೇಲೆ ನಕಾರಾತ್ಮಕ ಪರಿಣಾಮ ಬೀರಬಲ್ಲ ಈ ವಂಚನೆಯ ವ್ಯವಹಾರ ತಡೆಯುವಂತೆ ಕೋರಿ ಕೇಂದ್ರ ಸಚಿವ ಡಿ,ವಿ ಸದಾನಂದ ಗೌಡರ ನೇತೃತ್ವದಲ್ಲಿ ಕ್ಯಾಂಪ್ಕೊ ನಿಯೋಗ ಕೇಂದ್ರಕ್ಕೆ ಮನವಿ ಸಲ್ಲಿಸಿದೆ. ಗೃಹ ಸಚಿವ ರಾಜನಾಥ್ ಸಿಂಗ್ ವಾಣಿಜ್ಯ ಸಚಿವ ಸುರೇಶ್ ಪ್ರಭು ಮತ್ತು ಹಣಕಾಸು ಸಚಿವ ಪಿಯೂಷ್ ಗೋಯೆಲ್ ಅವರನ್ನು ಭೇಟಿ ಮಾಡಿದ ನಿಯೋಗದಲ್ಲಿ ಸಂಸದರಾದ ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ, ಬಿ.ವೈ. ರಾಘವೇಂದ್ರ, ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್ ಸತೀಶ್ಚಂದ್ರ, ಕ್ರಾಂಪ್ಸ್ ಅಧ್ಯಕ್ಷ ಎಚ್.ಎಸ್ ಮಂಜಪ್ಪ, ಮ್ಯಾಮ್ಕೋಸ್ ಉಪಾಧ್ಯಕ್ಷ ವೈ.ಸುಬ್ರಹ್ಮಣ್ಯ ಮುಂತಾದವರಿದ್ದರು.
ಅಕ್ರಮ ಅಡಕೆ ಪರಿಣಾಮಕಾರಿಯಾಗಿ ತಡೆಗಟ್ಟಲು, ದೇಶದ ಗಡಿಪ್ರದೇಶದಲ್ಲಿ ರಕ್ಷಣಾ ವ್ಯವಸ್ಥೆಯನ್ನು ಬಿಗಿಗೊಳಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಅಕ್ರಮ ಅಡಕೆ ವ್ಯವಹಾರದಲ್ಲಿ ತೊಡಗಿರುವ ವ್ಯಾಪಾರಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳವುದಾಗಿ ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ. ಕಟ್ಟುನಿಟ್ಟಿನ ಕ್ರಮ ಜರಗಿಸುವುದರಿಂದ, ದೇಶಿಯ ಮಾರುಕಟ್ಟೆಗೆ ಭದ್ರತೆ ಒದಗಿ ಬೆಲೆಯ ಸ್ಥಿರತೆಯೊಂದಿಗೆ ಅಡಕೆ ಬೆಳೆಗಾರರ ಹಿತರಕ್ಷಣೆಯಾಗಲಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್ ಸತೀಶ್ಚಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.