ಕುಂದಾಪುರ,ಫೆ 14(MSP): ಕೂಲಿ ಕೆಲಸಕ್ಕೆಂದು ಬಂದಿದ್ದ ಕುಟುಂಬವೊಂದರ 7 ತಿಂಗಳ ಹೆಣ್ಣು ಮಗುವೊಂದನ್ನು ರಾತ್ರೋರಾತ್ರಿ ಟೆಂಟ್ ಒಳಗಿಂದ ಅಪಹರಿಸಿದ ಘಟನೆ ಕುಂದಾಪುರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಹೊಟ್ಟೆಪಾಡಿಗಾಗಿ ಬಂದಿದ್ದ ಕೂಲಿ ಕುಟುಂಬ ಈಗ ಮಗುವನ್ನು ಹುಡುಕಲಾಗದೇ ಕಂಗಾಲಾಗಿದ್ದಾರೆ.
ಮೂಲತಃ ಮಂಗಳೂರಿನ ವಾಮಂಜೂರಿನವರಾದ ಜಾನಿ ಮೊಂತೆರೋ ಹಾಗೂ ಆಶಾ ಎಂಬುವರು ಕಳೆದ ಮೂರು ವರ್ಷಗಳಿಂದ ಕೋಟೇಶ್ವರ ಸಮೀಪದ ಕಾಗೇರಿ ಎಂಬಲ್ಲಿ ಕಳೆದ ಮೂರು ವರ್ಷಗಳಿಂದ ಟೆಂಟ್ ಹಾಕಿಕೊಂಡು ವಾಸಿಸುತ್ತಿದ್ದರು. ಅಕ್ಕಪಕ್ಕದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಜಾನಿ ಮೊಂತೊರೋಗೆ ಇಬ್ಬರು ಮಕ್ಕಳು. ಅಪಹರಣಕ್ಕೊಳಗಾದ ೭ ತಿಂಗಳ ಪ್ರಾಯದ ಮಿನಿಷಾ ಎರಡನೇಯವಳು.
7 ತಿಂಗಳ ಮಿನಿಷಾಳಿಗೆ ತೂಕ ಕಡಿಮೆಯಿರುವ ಸಮಸ್ಯೆಯಿತ್ತೆನ್ನಲಾಗಿದೆ. ಅದೇ ಕಾರಣಕ್ಕೆ ವೈದ್ಯರಲ್ಲಿ ಪರೀಶಲಿಸಿದಾಗ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲು ಸೂಚಿಸಿದ್ದರೆನ್ನಲಾಗಿದೆ. ಅದರಂತೆ ಕೆಲವು ದಿನ ವಾಮಂಜೂರಿನಲ್ಲಿ ನಿಂತು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವಾಪಾಸ್ಸು ಹಿಂತಿರುಗಿದ್ದರು. ಆದರೆ ಶುಕ್ರವಾರ ರಾತ್ರಿ 1.30ರ ಸುಮಾರಿಗೆ ಎಚ್ಚರವಾದಾಗ ಮಲಗಿದ್ದ ಮಗು ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ನಾಪತ್ತೆಯಾಗಿರುವ ಮಗುವಿನ ಭಾವಚಿತ್ರ ಇಲ್ಲದೇ ಇರುವುದರಿಂದ ಪೋಷಕರಿಗೆ ಮಗುವಿನ ಪತ್ತೆಗೆ ಸಹಕರಿಸಲು ಪೊಲೀಸರಿಗೆ ಸಾಧ್ಯವಾಗುವುದಿಲ್ಲ ಎನ್ನುವ ಕಾರಣಕ್ಕೆ ಮಗು ನಾಪತ್ತೆ ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸರು ನಿರಾಕರಿಸಿದ್ದು, ನ್ಯಾಯಾಲಯದ ಮೊರೆ ಹೋಗುವಂತೆ ಸೂಚಿಸಿದ್ದಾರೆ ಎಂದು ಪೋಷಕರು ತಿಳಿಸಿದ್ದಾರೆ. ಕೂಲಿ ಮಾಡುವ ಕುಟುಂಬ ನ್ಯಾಯಾಲಯದ ಮೆಟ್ಟಿಲೇರಲು ಸಾಧ್ಯವಾಗದೇ, ಠಾಣೆಯಲ್ಲಿಯೂ ಪ್ರಕರಣ ದಾಖಲಿಸಲು ಸಾಧ್ಯವಾಗದೇ, ಮಗುವನ್ನೂ ಪತ್ತೆಮಾಡಲಾಗದೇ ಕಂಗಾಲಾಗಿದ್ದಾರೆ.