ಮಂಗಳೂರು,ಫೆ 14(MSP): ಕರಾವಳಿಯಿಂದ ರಾಜ್ಯ ರಾಜಧಾನಿಯನ್ನು ಸಂಪರ್ಕಿಸುವ ಬೆಂಗಳೂರು– ಮಂಗಳೂರು ನಡುವೆ ವಾರಕ್ಕೆ ಮೂರು ದಿನ ರಾತ್ರಿ ಸಂಚರಿಸಲಿರುವ ಹೊಸ ಎಕ್ಸ್ಪ್ರೆಸ್ ರೈಲು ಸೇವೆಗೆ ಇದೇ 21ರಂದು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಚಾಲನೆ ದೊರೆಯಲಿದೆ.
ವಾರಕ್ಕೆ ಮೂರು ಬಾರಿ ಸಂಚರಿಸಲಿರುವ ಮಂಗಳೂರು ಸೆಂಟ್ರಲ್– ಯಶವಂತಪುರ ಎಕ್ಸ್ಪ್ರೆಸ್ ರೈಲಿಗೆ ಫೆ. 21 ರಂದು ಬೆಳಗ್ಗೆ 11 ಗಂಟೆಗೆ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಸಂಸದ ನಳಿನ್ ಕುಮಾರ್ ಹಸಿರು ನಿಶಾನೆ ತೋರಲಿದ್ದಾರೆ.
ಹೊಸ ರೈಲು ಶುಕ್ರವಾರ, ಭಾನುವಾರ ಹಾಗೂ ಮಂಗಳವಾರ ಸಂಜೆ 4.30ಕ್ಕೆ ಯಶವಂತಪುರ ನಿಲ್ದಾಣದಿಂದ ಹೊರಟು ಶನಿವಾರ, ಸೋಮವಾರ ಹಾಗೂ ಬುಧವಾರ ಬೆಳಗಿನ ಜಾವ 4ಕ್ಕೆ ಮಂಗಳೂರು ತಲುಪಲಿದೆ.
ಮಂಗಳೂರಿನಿಂದ ಹೊರಡುವ ರೈಲು ಶನಿವಾರ, ಸೋಮವಾರ, ಬುಧವಾರಗಳಂದು ರಾತ್ರಿ 7 ಗಂಟೆಗೆ ಹೊರಟು ಮುಂಜಾನೆ 4.30ಕ್ಕೆ ಯಶವಂತಪುರ ತಲುಪಲಿದೆ. ನೂತನ ರೈಲಿನಿಂದಾಗಿ ಬೆಂಗಳೂರಿನಿಂದ ಕುಕ್ಕೆ ಸುಬ್ರಹ್ಮಣ್ಯ, ಮಂಗಳೂರು ಸುತ್ತಮುತ್ತಲಿನ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಲಿದೆ.
ಸದ್ಯ ವಾರದಲ್ಲಿ ಮೂರು ದಿನ ಈ ರೈಲು ಸಂಚಾರ ನಡೆಸಲಿದ್ದು, ಮುಂದಿನ ದಿನಗಳಲ್ಲಿ ಪ್ರತಿದಿನ ಸಂಚರಿಸುವ ಸಾಧ್ಯತೆಗಳಿವೆ.