ಮಂಗಳೂರು, ಅ 08 (DaijiworldNews/HR): ಮಂಗಳೂರು ದಸರಾ ಸಂಭ್ರಮಾಚರಣೆಯ ಪ್ರಯುಕ್ತ ಅ.6ರಂದು ತುಳುನಾಡ ಸಾಂಪ್ರದಾಯಿಕ ಕಲೆಯ ಗತ್ತಿನ ಪ್ರದರ್ಶನ ಹುಲಿ ಕುಣಿತ ನಡೆಯಿತು.
ಪ್ರಮೋದ್ ಕರ್ಕೇರ ನೇತೃತ್ವದಲ್ಲಿ 'ಪಿಲಿ ಅಜನೆ'-ಬಿರ್ದ್ದ ಪಿಲಿತ್ತ -ಗತ್ತುದ ಅಜನೆ ಪ್ರದರ್ಶನ ಮಂಗಳೂರಿನ ಎಂ.ಜಿ ರಸ್ತೆಯ ದೀಪ ಕಂಫರ್ಟ್ಸ್ ಬಳಿ ನಡೆಯಿತು.
ಮಂಗಳೂರಿನ ಹೆಸರಾಂತ ಹುಲಿ ವೇಷಧಾರಿ ತಂಡಗಳಾದ ಬಜಿಲಕೇರಿ ಹಾಗೂ ಸ್ವಸ್ತಿಕ್ ಫ್ರೆಂಡ್ಸ್ ಕೋಡಿಕಲ್ ತಂಡಗಳು ಅದ್ಭುತವಾಗಿ ಹುಲಿ ಪ್ರದರ್ಶನ ನೀಡಿದರು. ಅದಕ್ಕೂ ಮೊದಲು ಹಿರಾ ಐಟಿ ಸೊಲ್ಯೂಷನ್ ಕಚೇರಿಯಲ್ಲಿ ಪೂಜೆ ನಡೆಯಿತು.
ಕಾರ್ಯಕ್ರಮಕ್ಕೆ ಕಾಂತಾರ ಸಿನಿಮಾ ತಂಡದ ನಟ ಪ್ರಕಾಶ್ ತೂಮಿನಾಡ್ ಭಾಗವಹಿಸಿ ಮಾತನಾಡಿ, ಹುಲಿ ಕುಣಿತ ಪ್ರದರ್ಶನ ಮಂಗಳೂರಿನ ಅಲ್ಲಲ್ಲಿ ನಡೆಯುತ್ತಿರುವುದು ನಮ್ಮ ಸಂಸ್ಕೃತಿಯ ಹೆಮ್ಮೆಯಾಗಿದೆ. ಪ್ರಮೋದ್ ಕರ್ಕೇರ ಅವರ ಪ್ರಥಮ ವರ್ಷದ ಸೇವೆಯಾದರೂ ಕೂಡಾ ಬಹಳ ಅದ್ಧೂರಿಯಾಗಿ ನಡೆದಿದೆ. ಮುಂದಿನ ದಿನಗಳಲ್ಲಿ ಮಂಗಳೂರಿನ ನೆಹರೂ ಮೈದಾನದಲ್ಲಿ ಈ ಕಾರ್ಯಕ್ರಮ ಆಯೋಜನೆಗೊಳ್ಳಲಿ ಎಂದು ಹಾರೈಸಿದರು.
ಈ ಸಂದರ್ಭ ಕಾಂತಾರ ಸಿನಿಮಾದ ಮತ್ತೋರ್ವ ನಟ ಶನಿಲ್ ಗುರು ಮತ್ತು ರಂಜಿತ್ ಉಪಸ್ಥಿತರಿದ್ದರು.
ಹುಲಿ ವೇಷದ ಮಧ್ಯೆ ಚೆಂಡೆ ಹಾಗೂ ನಾಸಿಕ್ ಬ್ಯಾಂಡ್ ಪ್ರದರ್ಶನ ನಡೆಯಿತು. ಪಿಲಿ ಅಜನೆ ಪ್ರದರ್ಶನದಲ್ಲಿ ಹುಲಿ ಕುಣಿತ ವೇಷಧಾರಿಗಳು ನೆರೆದಿದ್ದವರನ್ನು ರೋಮಾಂಚನಗೊಳಿಸಿದರು. ಕಾರ್ಯಕ್ರಮದ ರೂವಾರಿ ಶ್ರೀ ಪ್ರಮೋದ್ ಕರ್ಕೇರ, ಕಾರ್ತಿಕ್ ಹಾಗೂ ಮತ್ತಿತ್ತರರು ಉಪಸ್ಥಿತರಿದ್ದರು. ಸುರೇಶ್ ಶೆಟ್ಟಿ ಬರ್ಕೆ, ಹಾಗೂ ಕುಮಾರಿ ಪ್ರಣವಿ ಕಾರ್ಯಕ್ರಮ ನಿರೂಪಣೆ ಮಾಡಿದರು.