ಕಾರ್ಕಳ, ಅ 08 (DaijiworldNews/HR): ರಾಷ್ಟ್ರೀಯ ಹೆದ್ದಾರಿ ಇಲಾಖೆಯ ದಿವ್ಯ ನಿರ್ಲಕ್ಷ್ಯದಿಂದಾಗಿ ಕಾರ್ಕಳ- ಬಜಗೋಳಿ ನಡುವೆ ಹಾದೂ ಹೋಗಿರುವ ರಾಷ್ಟ್ರೀಯ ಹೆದ್ದಾರಿಯ ಮಿಯ್ಯಾರು ಎಂಬಲ್ಲಿ ಸರಣಿಯಾಗಿ ಸಂಭವಿಸುತ್ತಿದ್ದ ಅಪಘಾತಗಳಿಗೆ ಒಂದಿಷ್ಟು ಬ್ರೇಕ್ ಬಿದ್ದಿದೆ. ಇದಕ್ಕೆ ಕಾರಣವಾಗಿರುವುದು ಸಾಮಾಜಿಕ ಕಾರ್ಯಕರ್ತರಾಗಿರುವ ಉದ್ಯಮಿಯೊಬ್ಬರು ಸ್ವಂತ ಖರ್ಚಿನಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ತೆರೆದುಕೊಂಡಿದ್ದ ಭಾರೀ ಗಾತ್ರದ ಹೊಂಡವನ್ನು ಪ್ಯಾಚ್ವರ್ಕ್ ಮಾಡಿಸಿದ್ದಾರೆ.
ಮಿಯ್ಯಾರಿನ ಉದ್ಯಮಿ ಎಪಿಎಂಸಿ ಉಪಾಧ್ಯಕ್ಷ ಹಾಗೂ ಸಮಾಜಸೇವಕ ಜೆರಾಲ್ಡ್ ಡಿಸಿಲ್ವ ಈ ಉದಾರತೆ ತೋರಿದ್ದಾರೆ. ಕಾರ್ಕಳ ಬಜಗೋಳಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಮಿಯ್ಯಾರು ಕುಂಟಿಬೈಲು ಎಂಬಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಅಪಾಯಕಾರಿ ಹೊಂಡ ನಿರ್ಮಾಣಗೊಂಡಿತ್ತು. ಈ ಕುರಿತು ಮಾಧ್ಯಮಗಳು ಸಮಗ್ರ ವರದಿ ಪ್ರಕಟಿಸಿ ಅಥವಾ ಪ್ರಸಾರ ಮಾಡಿ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಗಮನ ಸೆಳೆಯುವ ಪ್ರಯತ್ನ ಮಾಡಿದ್ದರೂ, ಕರ್ತವ್ಯ ನಿಷ್ಟೆ ಅಧಿಕಾರಿಗಳಿಂದಾಗಿ ಸರಣಿ ಅಪಘಾತ ಸಂಭವಿಸುತ್ತಿತ್ತು.
ಪ್ರವಾಸಿಗರೇ ಅತೀ ಹೆಚ್ಚು ಓಡಾಟ ನಡೆಸುವ ಈ ರಸ್ತೆಯಲ್ಲಿ ಅಪಾಯದ ಮುನ್ಸೂಚನೆ ಅರಿಯದೆ ಅನೇಕ ವಾಹನಗಳು ಅಪಘಾತಕ್ಕೀಡಾಗಿವೆ. ಅನೇಕ ರಕ್ತಪಾತಗಳು ಈ ಪ್ರದೇಶದಲ್ಲಿ ಘಟಿಸಿ ಹೋಗಿವೆ. ಈ ಬಗ್ಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಗಮನ ಸೆಳೆದರೂ ಪ್ರಯೋಜನವಾಗಿಲ್ಲ.
ದಕ್ಷಿಣ ಕನ್ನಡ-ಉಡುಪಿ ಜಿಲ್ಲೆ ಸಂಪರ್ಕದ ಸಾಣೂರು ಚಿಲಿಂಬಿ ಇಳಿಜಾರು ಪ್ರದೇಶದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ಗಾತ್ರದ ಹೊಂಡಗಳು ತೆರೆದುಕೊಂಡಿದೆ. ಇದು ವಾಹನದ ಸವಾರರು ಮತ್ತು ಚಾಲಕರ ಗಮನಕ್ಕೆ ಬಾರದೇ ಹೋಗುವುದರಿಂದ ಹೊಂಡ ಸಮೀಪಿಸುತ್ತಿದ್ದಂತೆ ವಾಹನಗಳು ಏಕಾಏಕಿ ಬ್ರೇಕ್ ಹಾಕಲು ಮುಂದಾಗುತ್ತಿರುವುದರಿಂದ ಹಾಗೂ ಹೊಂಡ ತಪ್ಪಿಸುವ ಭರದಲ್ಲಿ ಸರಣಿ ಅಪಘಾತಗಳು ಸಂಭವಿಸುತ್ತಿದೆ.
ಈ ಕುರಿತು ಮಾತನಾಡಿದ ಜೆರಾಲ್ಡ್ ಡಿಸಿಲ್ವ,ಇತ್ತೀಚೆಗೆ ಇದೇ ಹದಗೆಟ್ಟ ರಸ್ತೆಯಲ್ಲಿ ಬೈಕೊಂದು ಅಪಘಾತಕ್ಕೀಡಾಗಿತ್ತು. ಇದು ನನ್ನ ಕಣ್ಣೆದುರೇ ಘಟಿಸಿದ್ದ ಪರಿಣಾಮ, ಅಂದೇ ಅದಕ್ಕೊಂದು ಮುಕ್ತಿ ಹಾಡಬೇಕು ಎಂದು ನಿರ್ಧರಿಸಿದ್ದೆ. ಸ್ವಂತ ಖರ್ಚಿನಿಂದ ಕಾಂಕ್ರೀಟ್ ಅಳವಡಿಸಿ ಹೊಂಡಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದ್ದೇನೆ. ಇದೀಗ ಅನೇಕ ಅಪಘಾತಗಳು ಸಂಭವಿಸಿದ್ದು, ಮುಂದೆ ಪ್ರಾಣ ಹಾನಿ ಸಂಭವಿಸುವ ಮುನ್ನ ಎಚ್ಚೆತ್ತುಕೊಂಡು ಸಹಕರಿಸಿದ್ದೇನೆ ಎಂದರು.