ಕಾರ್ಕಳ, ಅ 08 (DaijiworldNews/HR): ಪರಿಸರಕ್ಕೆ ಮಾರಕವಾದ ಕಾರ್ಖಾನೆಗಳನ್ನು ಸ್ಥಾಪನೆಗೆ ಅವಕಾಶ ಇಲ್ಲ. ಅಂತಹ ಕಾರ್ಖಾನೆಗಳು ತಲೆ ಎತ್ತಿದರೆ ಜಿಲ್ಲಾಡಳಿತದೊಂದಿಗೆ ಸಮಾಲೋಚನೆ ನಡೆಸಿ ಮುಚ್ಚುಗಡೆಗೆ ಗ್ರೀನ್ ಸಿಗ್ನಲ್ ನೀಡಲಾಗುತ್ತದೆ ಎಂದು ಸಚಿವ ವಿ.ಸುನೀಲ್ ಕುಮಾರ್ ಹೇಳಿದರು.
ಮಿಯ್ಯಾರು ನೆಲ್ಲಿಗುಡ್ಡೆ ಪರಿಸರದಲ್ಲಿ ನಿರ್ಮಾಣವಾಗುತ್ತಿರುವ ಗೇರುಬೀಜ ಸಿಪ್ಪೆಯಿಂದ ಎಣ್ಣೆ ತೆಗೆಯುವ ರಾಸಾಯನಿಕ ಕಾರ್ಖಾನೆಯ ಸಮಸ್ಯೆ ಆಲಿಸಲು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ ಬಳಿಕ ಸ್ಥಳೀಯರನ್ನು ಉದ್ದೇಶಿಸಿ ಮಾತನಾಡಿದ ಅವರು, ಅಭಿವೃದ್ಧಿಗಾಗಿ ಕಾರ್ಖಾನೆಗಳು ಬೇಕು ಆದರೆ ಅದರಿಂದ ಸಾರ್ವಜನಿಕ ಜೇವನಕ್ಕೆ ಮಾರಕವಾದಲ್ಲಿ ಸುಮ್ಮನೆ ಕುಳಿತುಕೊಳ್ಳುವ ಜಾಯಮಾನ ನನ್ನದಲ್ಲ. ಇದರ ಕುರಿತು ನಾಗರಿಕರು ಆತಂಕ ಪಡುವ ಅಗತ್ಯ ಇಲ್ಲ ಎಂದರು.
ಇದೇ ಸಂದರ್ಭದಲ್ಲಿ ಮಿಯ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷ ಅಮೀನ್ ಗ್ರಾಮ ಪಂಚಾಯತ್ ಸದಸ್ಯರುಗಳು, ಜಿಲ್ಲಾಪಂಚಾಯತ್ ನ ಮಾಜಿ ಸದಸ್ಯೆ ದಿವ್ಯಶ್ರೀ ಜಿ ಅಮೀನ್, ನಲ್ಲೂರು ಗ್ರಾಮ ಪಂಚಾಯತ್ ಸದಸ್ಯ ಪ್ರಶಾಂತ್ ಪೂಜಾರಿ, ಮಿಯ್ಯಾರು ಗ್ರಾಮ ಪಂಚಾಯತ್ ನಿಕಟಪೂರ್ವ ಸದಸ್ಯರಾದ ಪ್ರಕಾಶ್ ಬಲಿಪ, ಜೆರಾಲ್ಡ್ ಡಿಸಿಲ್ವ, ನಲ್ಲೂರು ಗ್ರಾಮ ಪಂಚಾಯತ್ ನಿಕಟಪೂರ್ವ ಸದಸ್ಯ ಸುಕುಮಾರ್ ಶೆಟ್ಟಿ, ನೆಲ್ಲಿಗುಡ್ಡೆ ಪರಿಸರ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಪ್ರಶಾಂತ್ ಪೂಜಾರಿ ಮತ್ತು ಸದಸ್ಯರು ಉಪಸ್ಥಿತರಿದ್ದರು.