ಉಳ್ಳಾಲ, ಫೆ 13(SM): ಮನೆ ಕೆಲಸಕ್ಕಿದ್ದ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ತಲಪಾಡಿ ಪೂಮಣ್ಣು ಎಂಬಲ್ಲಿ ಬುಧವಾರ ಸಂಜೆ ಸಂಭವಿಸಿದೆ. ದೆಹಲಿ ಮೂಲದ ರೇಷ್ಮಾ(17) ಆತ್ಮಹತ್ಯೆ ಮಾಡಿಕೊಂಡಿರುವ ಬಾಲಕಿ.
ವಿದೇಶದಲ್ಲಿರುವ ಉದ್ಯಮಿ ಮಹಮ್ಮದ್ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ. ಮಹಮ್ಮದ್ ಅವರ ಸಂಬಂಧಿ ಚಿಕ್ಕಪ್ಪನ ಪುತ್ರ ಹಮೀದ್ ಕುಟುಂಬಕ್ಕೆ ಮನೆಯನ್ನು ಇರಲು ನೀಡಿದ್ದರು. ಬುಧವಾರ ಸಂಜೆ ಮನೆಮಂದಿ ಹೊರಗೆ ತೆರಳಿದ್ದ ಸಂದರ್ಭ ಬಾಲಕಿ ಮನೆಯ ಫ್ಯಾನಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಮನೆಮಂದಿ ಮನೆಗೆ ವಾಪಸ್ಸಾದಾಗ ಘಟನೆ ಬೆಳಕಿಗೆ ಬಂದಿದೆ.
ಘಟನೆ ಕುರಿತು ಸ್ಥಳೀಯರು ಸಂಶಯ ವ್ಯಕ್ತಪಡಿಸಿ ಇದೊಂದು ಕೊಲೆ ಪ್ರಕರಣ ಎಂದು ಆರೋಪಿಸಿ ಮನೆಮಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಾಲಕಿ ಮೆಟ್ಟಿಲಿನಲ್ಲಿ ನಿಂತು ನೇಣುಬಿಗಿಯಲು ಸಾಧ್ಯವಿಲ್ಲ ಅನ್ನುವ ಅನುಮಾನ ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಸ್ಥಳೀಯರು ಮಾಧ್ಯಮದವರು ಮತ್ತು ಫಾರೆನ್ಸಿಕ್ ವೈದ್ಯರು ಬಂದ ಬಳಿಕವೇ ಮೃತದೇಹವನ್ನು ತೆಗೆಯಬೇಕೆಂದು ಒತ್ತಾಯಿಸಿದರು. ನಿಟ್ಟೆ ಫಾರೆನ್ಸಿಕ್ ವಿಭಾಗದ ಮುಖ್ಯಸ್ಥ ಡಾ| ಮಹಾಬಲೇಶ್ ಶೆಟ್ಟಿ ಪ್ರಾಥಮಿಕ ತನಿಖೆ ನಡೆಸಿ, ಬಾಲಕಿ ಜೊಲ್ಲು ಕಾರಿರುವುದರಿಂದ ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಹೇಳಿದರು.
ಹೆಚ್ಚಿನ ವರದಿ ಶವಮಹಜರು ನಡೆಸಿದ ಬಳಿಕ ತಿಳಿದು ಬರಬೇಕಿದೆ ಎಂದಿದ್ದಾರೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಾಲಕಿ ಆತ್ಮಹತ್ಯೆಗೆ ಕಾರಣವನ್ನು ದೆಹಲಿಯಿಂದ ಗುರುವಾರ ಮಂಗಳೂರಿಗೆ ತಲುಪುವ ಮನೆಮಂದಿಯಿಂದ ಪಡೆಯಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ವರ್ಷದ ಹಿಂದೆ ಮೃತ ರೇಷ್ಮಾಳ ಹಿರಿಯ ಸಹೋದರಿ ಇದೇ ಮನೆಯಲ್ಲಿ ಕೆಲಸಕ್ಕಿದ್ದಳು. ಮದುವೆ ನಂತರ ಸಹೋದರಿ ರೇಷ್ಮಾ ಕೆಲಸಕ್ಕೆ ಬಂದಿದ್ದಳು.