ಮಂಗಳೂರು, ಫೆ 13(SM): ಮಂಗಳೂರು ವಿಮಾನ ನಿಲ್ದಾಣದಲ್ಲಿ ಏರ್ಪೋರ್ಟ್ ಟ್ಯಾಕ್ಸಿ ಚಾಲಕರಿಂದ ಮತ್ತೆ ಗೂಂಡಾಗಿರಿ ಮುಂದುವರೆದಿದೆ. ಓಲಾ ಕ್ಯಾಬ್ ಚಾಲಕನೋರ್ವನ ಮೇಲೆ 15 ಮಂದಿಯ ತಂಡ ಹಲ್ಲೆ ನಡೆಸಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಗುರುಕಂಬಳ ನಿವಾಸಿ ಮೊಹಮ್ಮದ್ ತಾಸೀನ್ (50), ಬಜಪೆ ನಿವಾಸಿ ಅಬ್ದುಲ್ ರಹಿಮಾನ್ (41) ಹಾಗೂ ಬಡಗುಳಿಪಾದಿ ನಿವಾಸಿ ಉಸ್ಮಾನ್ @ ಅಬ್ಬಾಸ್ (38) ಬಂಧಿತ ಆರೋಪಿಗಳು. ಸದ್ಯ ಬಜಪೆ ಠಾಣಾ ಪೊಲೀಸರು ಆರೋಪಿಗಳ ವಿಚಾರಣೆ ಮುಂದುವರೆಸಿದ್ದಾರೆ.
ಓಲಾ ಕ್ಯಾಬ್ ಚಾಲಕ ರತನ್ ಹಲ್ಲೆಗೊಳಗಾದವರು. ಓಲಾ ಟ್ಯಾಕ್ಸಿ ನಿಲುಗಡೆ ಕೇಂದ್ರಕ್ಕೆ ನುಗ್ಗಿ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ. ಈ ಬಗ್ಗೆ ಬಜ್ಪೆ ಠಾಣಾ ಪೊಲೀಸರಿಗೆ ರತ್ನ್ ದೂರು ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಮಂದಿಯನ್ನು ಪೋಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ಇದೀಗ ಏರ್ಪೋರ್ಟ್ ಪಾರ್ಕಿಂಗ್ ಯಾರ್ಡನಲ್ಲಿ ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದಾರೆ.