ಪುಂಜಾಲಕಟ್ಟೆ,ಅ 07 (DaijiworldNews/MS): ಪುಂಜಾಲಕಟ್ಟೆ ಸಮೀಪದ ನಯನಾಡು ಸ್ನೇಹಗಿರಿ ರಸ್ತೆಯಲ್ಲಿ ಬೆದರಿಕೆ ಬರಹ ಬರೆದಿರುವ ದುಷ್ಕರ್ಮಿಗಳಿಗಾಗಿ ಪುಂಜಾಲಕಟ್ಟೆ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.
ಬರಹ ಕಂಡು ಬರುವ ಪ್ರದೇಶ ತೀರಾ ಗ್ರಾಮೀಣ ಭಾಗವಾಗಿದ್ದು ಹೀಗಾಗಿ ತನಿಖೆ ಮಾಡಲು ಪೊಲೀಸರಿಗೆ ಸವಾಲಾಗಿದೆ. ಆದರೆ, ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.
ಬರಹ ಇರುವ ರಸ್ತೆಯಲ್ಲಿ ಸಿಸಿಟಿವಿ ಇಲ್ಲದೇ ಇರುವುದರಿಂದ ಪೊಲೀಸ್ ಇಲಾಖೆಗೆ ಹಿನ್ನಡೆಯಾಗಿದೆ. ಪೊಲೀಸರು ಕೆಲವು ಶಂಕಿತರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಕೆಲವರ ಚಲನವಲನದ ಮೇಲೂ ನಿಗಾ ಇಡುತ್ತಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರ ಪಿಎಫ್ ಐ ಸಂಘಟನೆ ನಿಷೇಧ ಮಾಡಿದ ಹಿನ್ನಲೆಯಲ್ಲಿ ಕಿಡಿಗೇಡಿಗಳು “ಚಡ್ಡಿಗಳೆ ಎಚ್ಚರಿಕೆ ಪಿಎಫ್ಐ ನಾವು ಮರಳಿ ಬರುತ್ತೇವೆ “ಎಂದು ಬಿಳಿ ಬಣ್ಣದ ಸ್ಪ್ರೆ ಪೈಂಟಿನಿಂದ ಬೆದರಿಕೆ ಬರಹ ಬರೆದಿದ್ದರು.
ಅ. ೫ ರಂದು ಘಟನಾ ಸ್ಥಳಕ್ಕೆ ಎಸ್ಪಿ ಹೃಷಿಕೇಶ್ ಸೋನಾವಾನೆ ಅವರು ಅಕ್ಟೋಬರ್ನಲ್ಲಿ ಭೇಟಿ ನೀಡಿ ಪೊಲೀಸ್ ಠಾಣೆಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಚರ್ಚೆ ನಡೆಸಿದರು. ಬೆಳ್ತಂಗಡಿ ಸಿಐ ಶಿವಕುಮಾರ್ ಬಿ ನೇತೃತ್ವದಲ್ಲಿ ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಪಿಎಸ್ಐ ಸುತೇಶ್ ಕೆ.ಪಿ ಮತ್ತು ಸಿಬ್ಬಂದಿ ತನಿಖೆ ನಡೆಸುತ್ತಿದ್ದಾರೆ.